ಸೋಮವಾರ, ಜುಲೈ 11, 2016

ಪ್ರಜ್ಞಾವಂತ ಕನ್ನಡಿಗರ ಜವಾಬ್ದಾರಿಯ ವ್ಯಾಪ್ತಿ ಎಷ್ಟು?



ಇಂದಿನ ಜನಜೀವನದಲ್ಲಿ, ಯುವ ಜನತೆಯ ಜೀವನ ಶೈಲಿಯಲ್ಲಿ, ಸಾಮಾಜಿಕ ಜಾಲತಾಣಗಳು ಬಹಳಷ್ಟು ಪ್ರಾಮುಖ್ಯತೆ ಪಡೆದಿವೆ. ಒವುಗಳಿಂದ ಆಗುವ ಅನಾನುಕೂಲಗಳು ಒಂದೆಡೆಯಾದರೆ, ಅನುಕೂಲಗಳು ಬಹಳಷ್ಟಿವೆ. ಇಂದು, ಇದೇ ಸಾಮಾಜಿಕ ಜಾಲತಾಣಗಳಲ್ಲಿ ಸುಳಿದಾಡುವ ವಿಷಯಗಳು ವಿಧಾನಸೌದದ ಕಲಾಪಗಳಲ್ಲಿ ಚರ್ಚೆಯಾಗುವಷ್ಟು ಪ್ರಭಾವಿತವಾಗಿವೆ.
ಇಂಥಹ ಸಾಮಾಜಿಕ ಜಾಲತಾಣವನ್ನು ಇಂದು ಪ್ರಜ್ಞಾವಂತ ಕನ್ನಡಿಗರು, ಕನ್ನಡಿಗರನ್ನು ಒಗ್ಗೂಡಿಸಲು, ಸ್ವಾಭಿಮಾನ ತುಂಬಲು, ಇತಿಹಾಸ ಪ್ರಜ್ಞೆ, ಅಭಿಪ್ರಾಯ ಸಂಗ್ರಹ ಮಾಹಿತಿ ಹಂಚಿಕೆ ಹಾಗು ಅಲ್ಪ ಮಟ್ಟದಿಂದ ಬಹುಮಟ್ಟಿಗೆ ಬದಲಾವಣೆಗಳನ್ನು ತರುವಲ್ಲಿಗೆ ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ. ಇಂಥಹ ಪ್ರಕೃತಿಯಿಂದಾಗಿ, ಬಹುಮಟ್ಟಿಗೆ ಕನ್ನಡಿಗರಲ್ಲಿ ಕನ್ನಡತನ ಹೆಚ್ಚುವಂತಾಗಿದೆ.
ಪರ-ವಿರೋಧಗಳ ಚರ್ಚೆಯಲ್ಲಂತೂ ರಾಜ್ಯದ ಅಡಳಿತ ಪಕ್ಷದ ಎದುರು ಸತ್ತಂತಿರುವ ವಿರೋಧ ಪಕ್ಷಕ್ಕಿಂತಲೂ ಒಂದು ಕೈ ಮೇಲೆ ಎಂದರೆ ಹಾಸ್ಯಾಸ್ಪದ ಎನಿಸದು!
ಈ ಸಾಮಾಜಿಕ ಜಾಲತಾಣಗಳು ಎಷ್ಟರ ಮಟ್ಟಿಗೆ ನಮ್ಮನ್ನಾಳುವ ರಾಜಕಾರಣಿಗಳ ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವಿತವಾಗಿವೆ ಎಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಆಗುವ "Trend"ಗಳು, ಚರ್ಚೆಗಳು, ರಾಜಕಾರಣಿಗಳು ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳಲ್ಲಿ ಹಸ್ತಕ್ಷೇಪಗಳನ್ನು ಹೊಂದಿರುತ್ತದೆ. ತಮ್ಮ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಯುವ ಜನತೆಯ ಜನಾಭಿಪ್ರಾಯವನ್ನು ಗಮನಿಸಲು ಬಳಸುತ್ತಾರೆ. ಇದಕ್ಕಾಗಿಯೇ ರಾಜಕಾರಣಿಗಳು, ರಾಜಕೀಯ ಪಕ್ಷಗಳು "Media Wing"ಗಳ ಮೂಲಕ ಸಕ್ರಿಯರಾಗಿರುತ್ತಾರೆ.
ಇಂದು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದನ್ನು ನಮ್ಮ ಕನ್ನಡ ಭಾಷಾಭಿಮಾನಿಗಳಿಗೆ ನಿಜಕ್ಕೂ ಅಭಿನಂದನೆ ಸಲ್ಲಿಸಲೇ ಬೇಕು.
ಆದರೆ ಇಲ್ಲಿಯೂ ಒಂದು ಕೊರತೆ ಕಾಣುವುದಂತು ನಿಜ!
ಅದೇ "ಪ್ರಜ್ಞಾವಂತ ನಿಜ ಕನ್ನಡಿಗರ ಜವಾಬ್ದಾರಿ ವ್ಯಾಪ್ತಿ ಎಷ್ಟು?" ಎಂಬುದು!
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕನ್ನಡ ಪರ ಫೇಸ್ಬುಕ್ ಪುಟಗಳು, ಗುಂಪುಗಳು, ಬ್ಲಾಗರ್, ವೆಬ್ ಸೈಟ್, ಟ್ವಿಟ್ಟರ್, ಇತ್ಯಾದಿ ಇವೆಲ್ಲವೂ ಇಂದು, ಸಾಮಾನ್ಯ ಯುವ ಜನತೆಯಲ್ಲಿ ಕನ್ನಡತ್ವ, ಕನ್ನಡತನ ಮತ್ತು ಇತಿಹಾಸ ಪ್ರಜ್ಞೆಯನ್ನು ಬಿತ್ತುತ್ತಿದ್ದರೂ ಸಹ, ಆ ವಿಷಯಗಳು ಕೇವಲ ಪ್ರದೇಶಗಳಿಗೆ, ಮತ್ತು ಕೆಲವೇ ಟಾಪಿಕ್'ಗಳಿಗೆ ಸೀಮಿತವಾಗಿರುವುದು ಒಂದು ದೊಡ್ಡ ಹಿನ್ನೆಡೆಯೇ ಸರಿ!
ಬೆಂಗಳೂರಿನ ಯಾವುದೋ ಒಂದು ಭಾಗದಲ್ಲಿ, ತಮಿಳಿಮಲ್ಲೊ, ಬೆಂಗಾಲಿಯಲ್ಲೊ ನಾಮಫಲಕವಿದ್ದರೆ, ಅದರ ಚಿತ್ರಪಟಕ್ಕೆ ಒಂದಷ್ಟು ಪೀಠಿಕೆ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ, ಕನ್ನಡ ಕಡಗಣನೆಯ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸಿ, ಅದರ ಬಂಡಾಯವೇಳಿಸಿ, ಅಲ್ಲಿಯೇ ಕನ್ನಡಕ್ಕೆ ಸ್ಥಾನಮಾನವನ್ನು ಗಳಿಸಿಕೊಡುವುದು ನಿಜಕ್ಕೂ ಸಂತಸದ ವಿಷಯವೆ.
ಆದರೆ, ಇಂಥಹ ಘಟನೆ ಮೈಸೂರಿನಲ್ಲಿ ನಡೆದರೆ ಖಂಡಿಸುವವರ್ಯಾರು?

ಮೈಸೂರಿನ ವಾಣಿಜ್ಯದಲ್ಲಿ ಬಹುತೇಕ ಮಲಯಾಳಿಗಳೇ ತುಂಬಿದ್ದು, ಅವರಿಗೆ ಕನ್ನಡ ಕಲಿಯುವ ಸೌಜನ್ಯವೂ ಇಲ್ಲ! ಇನ್ನು ತಮ್ಮ ಹೋಟೆಲ್ ಲಾಡ್ಜ್ ರೆಸ್ಟೋರೆಂಟ್'ಗಳಲ್ಲಿ ಕನ್ನಡವನ್ನು ಕಡೆಗಣಿಸಿ, ಮಲಯಾಳಂನಲ್ಲಿ ನಾಮಫಲಕ ಹಾಕಿಕೊಂಡಿರುತ್ತಾರೆ! ಯಾಕೆ? ಅವರು ಇರುವ ರಾಜ್ಯ, ಆ ರಾಜ್ಯಕ್ಕೊಂದು ಭಾಷೆ ಇದೆ ಎಂಬ ಅರಿವು ಅವರಿಗಿಲ್ಲವೆ?
ಇದನ್ನೆಲ್ಲ ಖಂಡಿಸಿ, ಹೋರಾಡಿ, ಸರಿಪಡಿಸುವವರು ಯಾರು?
ಇಂಥಹದೇ ಘಟನೆ ಕೋಲಾರ, ಚಿತ್ರದುರ್ಗದ ಕಡೆ ಸಂಭವಿದಿದರೆ ಅದನ್ನು ಖಂಡಿಸಿ ಸರಿಪಡಿಸುವ ಜವಾಬ್ದಾರಿ ಯಾರದು?
ಇದೇ ರೀತಿ, ಕನ್ನಡವು ಬೆಳಗಾವಿ - ಬೀದರ್, ಗುಲ್ಬರ್ಗಗಳಲ್ಲಿ ಕಡೆಗಣಿಸಲ್ಪಟ್ಟರೆ ಕೇಳುವವರು ಯಾರಿದ್ದಾರೆ?
ಇದೆಲ್ಲವನ್ನು ಯೋಚಿಸಿದರೆ, ನಿಜಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕನ್ನಡ ಪರ ತಂಡಗಳು, ಇನ್ನೂ ಸಹ ತಮ್ಮ ನಡೆಯ ಪ್ರಥಮ ಹಂತದಲ್ಲಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಂಡು ಮುನ್ನಡೆಯುವುದು ಅತ್ಯಾವಶ್ಯಕ.

ಈ "ಕನ್ನಡ ಪ್ರಜ್ಞೆ" ಯು ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದೆಲ್ಲೆಡೆ ಅಷ್ಟೇ ಅಲ್ಲದೆ ಕನ್ನಡಿಗರು ಇರುವಲ್ಲೆಲ್ಲಾ ಹರಡಿಸಬೇಕು, ಕಟ್ಟಕಡೆಯ ಕನ್ನಡಿಗನ ಮನಸ್ಸಿನಲ್ಲಿಯೂ ಮೂಡುವಂತಾಗಬೇಕಿದೆ.
"ಕನ್ನಡ-ಕನ್ನಡಿಗ-ಕರ್ನಾಟಕ" ಸಿದ್ಧಾಂತದಲ್ಲಿ ಕರ್ನಾಟಕದ ಜೊತೆಯೇ, ಕರ್ನಾಟಕವನ್ನೂ ಮೀರಿ, ಕನ್ನಡ ಮತ್ತು ಕನ್ನಡಿಗರ ಅಸ್ತಿತ್ವವಿರುವ ಭಾರತದ ತುಂಬೆಲ್ಲಾ ಹರಡಿರುವ ಕನ್ನಡಿಗರ ಹಿತ ಕಾಯುವ ಜವಾಬ್ದಾರಿಯನ್ನು ಹೊರಬೇಕಿದೆ.

ಇತ್ತೀಚಿಗೆ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ಕಳೆದ ೧೫೦ ವರ್ಷಗಳಲ್ಲಿ ಕರ್ನಾಟಕದಿಂದ ಹೊರಕ್ಕೆ ಸುಮಾರು ೮.೨% ಕನ್ನಡಿಗರ ವಲಸೆಯಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರಕ್ಕೆ ಸುಮಾರು ೧೨.೫ ಲಕ್ಷ ಕನ್ನಡಿಗರು ವಲಸೆಯಾಗಿದ್ದು, ಅಲ್ಲಿನ ಮೂಲನಿವಾಸಿ ಕನ್ನಡಿಗರ ಸಂಖ್ಯೆಯು ಸುಮಾರು ೮-೧೦ ಲಕ್ಷ ಇದೆ ಎನ್ನಲಾಗಿದೆ.

ತಮಿಳುನಾಡಿಗೆ ಸುಮಾರು ೧೦.೫ ಲಕ್ಷದಷ್ಟು ಕನ್ನಡಿಗರ ವಲಸೆಯಾಗಿದ್ದು, ಕನ್ನಡಿಗರೊಂದಿಗೇ ತಮ್ಮ ಐಡೆಂಟಿಟಿ ಹಂಚಿಕೊಳ್ಳು ಬಡಗರು ಸುಮಾರು ೪-೫ ಲಕ್ಷ ಇದ್ದಾರೆ.
ತಮಿಳುನಾಡಿನ ಕನ್ನಡಿಗರ ಜನಸಂಖ್ಯೆಯ ವಿಚಾರದಲ್ಲಿ ಬಹಳಷ್ಟು ಗೊಂದಲವಿದ್ದು, ಕೆಲವು ಮೂಲಗಳ ಪ್ರಕಾರ, ಬಡಗರೂ ಸೇರಿ, ಕನ್ನಡವನ್ನು ಮಾತಾಡಬಲ್ಲ, ವ್ಯಾವಹಾರಿಕವಾಗಿ ಬಳಸಬಲ್ಲ, ಕನ್ನಡಿಗರ ಸಂಖ್ಯೆ, ತಮಿಳುನಾಡಿನಲ್ಲಿ ಸುಮಾರು ೧.೪೫ ಕೋಟಿ ಇದೆ ಎನ್ನಲಾಗಿದೆ.



ಬಹುಷಃ, ಮೇಲಿನ ಅಂಕಿಅಂಶಗಳಲ್ಲಿ ಸೂಚಿಸಲಾಗಿರುವ ೧೦-೧೫ ಲಕ್ಷ ವಲಸೆಯಾದ ಕನ್ನಡಿಗರು ಬಿಟ್ಟರೆ, ಮಿಕ್ಕವರು ಅಲ್ಲಿನ ಮೂಲನಿವಾಸಿ ಕನ್ನಡಿಗರು ಇರಬಹುದಾಗಿದೆ.
ಆಂಧ್ರಪ್ರದೇಶದಲ್ಲಿ ೫.೬೫ ಲಕ್ಷ, ಕೇರಳದಲ್ಲಿ ೦.೮೫ ಲಕ್ಷ, ಗೋವೆಯಲ್ಲಿ ೦.೭೫ ಲಕ್ಷದಷ್ಟು ಕನ್ನಡಿಗರು ಇದ್ದಾರೆ ಎನ್ನಲಾಗಿದೆ.
ಇದನ್ನು ಹೊರತುಪಡಿಸಿ, ಅಸ್ಸಾಂನಲ್ಲಿ ೨೦೦೦, ತ್ರಿಪುರದಲ್ಲಿ ೫೦೦, ನಾಗಾಲ್ಯಾಂಡ್'ನಲ್ಲಿ ೩೫೦, ಅರುಣಾಚಲ ಪ್ರದೇಶದಲ್ಲಿ ೫೦೦, ಮಿಜೋರಾಂನಲ್ಲಿ ೧೫೦, ಸಿಖ್ಖಿಂನಲ್ಲಿ ೧೪೦, ಮಣಿಪುರದಲ್ಲಿ ೨೫೦, ಮೇಘಾಲಯದಲ್ಲಿ ೩೦೦ರಷ್ಟು ಕನ್ನಡಿಗರಿದ್ದಾರೆ.
ಮುಂಬೈ, ದಿಲ್ಲಿ, ಹೈದರಾಬಾದ್, ಕೊಲ್ಕತ್ತಾ ನೇಪಾಳ ಮತ್ತು ಚಂಡೀಗರ್'ನಲ್ಲಿ ಕನ್ನಡ ಸಂಘಗಳಿವೆ.
ಇತ್ತೀಚಿನ ಸಂಶೋಧನೆಗಳು ಸಹ ಕನ್ನಡದ ವ್ಯಾಪ್ತಿಯ ಬಗ್ಗೆ ಹಲವು ರೋಚಕ ಸತ್ಯಾಂಶಗಳನ್ನು ಬಿಚ್ಚಿಡುತ್ತಿವೆ.

ಭಾಷ ಸಂಶೋಧಕರಾದ ಎಮ್. ನಂಜುಂಡ ಸ್ವಾಮಿ ಐ.ಪಿ.ಎಸ್'ರವರ ಅಭಿಪ್ರಾಯದಂತೆ, ಮಧ್ಯಪ್ರದೇಶದಲ್ಲಿ 'ಮಾಳವಿ' ಎಂಬ ಒಂದು ಭಾಷಾ ಪ್ರಾಕಾರವಿದ್ದು, ಅದು ಕನ್ನಡಕ್ಕೆ, ಅದರಲ್ಲೂ ಮಳವಳ್ಳಿ ಮಂಡ್ಯ ಭಾಗದ ಕನ್ನಡಕ್ಕೆ ಬಹುತೇಕ ಹೋಲಿಕೆಯಾಗುತ್ತದೆ, ಅದು ಕನ್ನಡದ ಉಪಭಾಷೆ ಎನ್ನಲು ಎಲ್ಲಾ ರೀತಿಯ ಮಾನ್ಯತೆಯೂ ಇದ್ದು, ಅದು ಅತಿಯಾದ ಆರ್ಯೀಕರಣಗೊಂಡ ಕಾರಣದಿಂದ (ಇಂಡೋ ಆರ್ಯನ್ ಭಾಷೆಗಳ ಅವಿರತ ಪ್ರಭಾವದಿಂದ) ಇಂದು 'ಮಾಳವಿ' ಎಂಬ ಕನ್ನಡದ ಒಂದು ಉಪಭಾಷೆಯು, ದ್ರಾವಿಡ ಪರಿವಾರ ವರ್ಗದಿಂದ ಬೇರಾಗಿದೆ ಎನ್ನುತ್ತಾರೆ.

ಹಾಗೆಯೇ ಮುಂದುವರೆದು, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿಯ ಹಲವು ಪ್ರದೇಶಗಳ ಸ್ಥಳೀಯ ಭಾಷಾ ಪ್ರಾಕಾರಗಳು ಕನ್ನಡಕ್ಕೆ ಹೋಲುವುದರ ಬಗ್ಗೆಯೂ ಬರೆದಿದ್ದಾರೆ.

ಪಾಟೀಲ್ ಪುಟ್ಟಪ್ಪನವರೂ ಸೇರಿದಂತೆ, ಇನ್ನೀತರೆ ಹಲವು ಭಾಷಾ ಸಂಶೋದಕರು ಇಂದು ತಿಳಿಸಿರುವಂತೆ, ಮಧ್ಯಪ್ರದೇಶದ ನೂರಾರು ಹಳ್ಳಿಗಳ ಭಾಷೆ ಕನ್ನಡವೇ ಆಗಿದೆ! ಮಧ್ಯಪ್ರದೇಶಲ್ಲಿ 'ಹೊಲಿಯ' ಎಂಬ ಕನ್ನಡದ ಉಪಭಾಷೆಯಿದೆ. ಅಲ್ಲಿನ ಸಾವಿರಾರು ಹೊಲಯರ ಮತ್ತು ಗೊಲ್ಲರ ಕುಟುಂಬಗಳ ತಾಯ್ನುಡಿ 'ಹೊಲಿಯ ಕನ್ನಡ'ವಾಗಿದೆ.
ಇನ್ನು ತಮಿಳುನಾಡನ ಬಡಗ ಮತ್ತು ಬಡಗರು ಸಹ ಕನ್ನಡದ ಕೊಂಬೆಯಾಗಿಯೇ ಗುರುತಿಸಿಕೊಂಡಿದೆ.



ಇದನ್ನೆಲ್ಲಾ ಯೋಚಿಸಿ, ಸಾಮಾಜಿಕ ಜಾಲತಾಣಗಳಲ್ಲಿಯ ಕನ್ನಡ ಪರ ಗುಂಪುಗಳು ಮತ್ತು ಅವರನ್ನು ಅನುಸರಿಸುವ ಸಾಮಾನ್ಯ ಕನ್ನಡಿಗ ಪ್ರಜೆಗಳು, ತಮ್ಮ ವಿಷಯ ವ್ಯಾಪ್ತಿ, ಜವಾಬ್ದಾರಿಯ ವ್ಯಾಪ್ತಿಯ ಬಗ್ಗೆ ಒಂದು ಸ್ಪಷ್ಟ ನಿಲುವನ್ನು ತಾಳಬೇಕಿದೆ.
"ಕನ್ನಡ ಪ್ರಜ್ಞೆ" ಕೇವಲ ಬೆಂಗಳೂರಿಗೆ ಸೀಮಿತವಾಗದೆ, ಕನ್ನಡ ನಾಡಿನ ಇಂಚಿಂಚಿಗೂ ತಲುಪಿ, ಕನ್ನಡ ಕನ್ನಡಿಗ ಕರ್ನಾಟಕವನ್ನು ಮೀರಿ "ಕನ್ನಡ - ಕನ್ನಡಿಗ" ಎಂಬ ಸಿದ್ಧಾಂತಕ್ಕೆ ಬದ್ಧರಾಗಿ, ಹೊರನಾಡಿನ ಕನ್ನಡ ಕನ್ನಡಿಗರಿಗೂ ನೆರವಾಗಿ ನಿಲ್ಲಬೇಕಿದೆ.
ಕನ್ನಡದ್ದೇ ಉಪಭಾಷೆಯಾದ ಬಡಗವು, ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆಗಳ ಸಾಲಿನಲ್ಲೇ ಮೊದಲನೆಯ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು!

ಇಂಥ ಕನ್ನಡದ ಒಂದು ಭಾಷಾ ಪ್ರಕಾರದ ಉಳಿವಿಗಾಗಿ ಕನ್ನಡಿಗರ ಬೆಂಬಲವೂ ಅವಶ್ಯಕ. ಭಾಷಾಶಾಸ್ತ್ರಜ್ಞರು, ಸಂಶೋಧಕರು ಹಾಗು ಬಡಗ ಸಾಹಿತಿಗಳು ಬಡಗ-ಕನ್ನಡದಲ್ಲಿ ಹೆಚ್ಚು ಹೆಚ್ಚು ಬರೆಯಲು ಓದಲು ಆರಂಭಿಸಿದಾಗ ಬಡಗ ಉಳಿಯುತ್ತದೆ. ಅರಳುತ್ತದೆ. ಇದಕ್ಕೆ ಕನ್ನಡಿಗರ ಬೆಂಬಲ ಬೇಕಿದೆ.
ಇನ್ನು ಮಧ್ಯಪ್ರದೇಶದ ನೂರಾರು ಹಳ್ಳಿಗರ ತಾಯ್ನುಡಿಯಾಗಿರುವ ಹೊಲಿಯ-ಕನ್ನಡವು, ಅಲ್ಲಿಯ ಜನತೆ, ಅದು ಕನ್ನಡ ಎಂಬುದರ ಅರಿವು ಇದ್ದಂತಿಲ್ಲ! ದುರದೃಷ್ಟಕರ ಸಂಗತಿ ಎಂಬಂತೆ, ಅವರಿಗೆ ಅವರಾಡುವ ನುಡಿಗೆ ಬರವಣಿಗೆ ರೂಪ ಕೊಡಲು ಕನ್ನಡ ಲಿಪಿಯೇ ತಿಳಿದಿಲ್ಲ!

ಬಡಗರ ವಿಷಯದಲ್ಲಿ ಸ್ವಲ್ಪ ಭಿನ್ನ! ಲಿಪಿ ಬಳಕೆಯ ವಿಚಾರದಲ್ಲಿ ಬಡಗರು ಗೊಂದಲದಲ್ಲಿದ್ದಾರೆ!
ಆದರೂ ಸಹ ಇವರಲ್ಲಿ ಹಲವರು ಕನ್ನಡ ಲಿಪಿಯನ್ನೇ ಬಳಸುತ್ತಾರೆ.
ಮೂಲನಿವಾಸಿ ಕನ್ನಡಿಗರ ವಿಷಯ ಬಿಟ್ಟರೆ, ಕನ್ನಡ ವಲಸೆಗಾರರು ವಲಸೆ ಧರ್ಮ ಪಾಲಿಸುವ ಸಜ್ಜನರಾಗಿದ್ದಾರೆ. ಈ ಶತಮಾನದ ಕನ್ನಡಿಗರು ವಲಸೆ ಹೋದ ಊರಿನ ಭಾಷೆ ಕಲಿಯುತ್ತಾರೆ. ಅಲ್ಲಿನ ಜನರೊಡನೆ ಬೇಗ ಹೊಂದಿಕೊಂಡು ಬೆಳೆಯುತ್ತಾರೆ. ಅಲ್ಲಿನ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಹಾಗೆಯೇ ತಮ್ಮ ಕನ್ನಡತನವನ್ನು ಮರೆಯುವುದಿಲ್ಲ.
ಇಂಥಹ ಹೊರನಾಡ ಮೂಲನಿವಾಸಿ ಕನ್ನಡಿಗರ, ಹಾಗು ಬೇರೆಡೆ ವಲಸೆ ಹೋದ ಕನ್ನಡಿಗರು, ವಲಸೆ ಧರ್ಮ ಪಾಲಿಸಿದ ಸಜ್ಜನ ಕನ್ನಡಿಗರ ನೈತಿಕ ಬೆಂಬಲಕ್ಕೆ ತವರಿನ ಕನ್ನಡಿಗರು ಸದಾ ನೈತಿಕ ಬೆಂಬಲವಾಗಿ ನಿಲ್ಲುವುದೂ ಸಹ ಕನ್ನಡಿಗರ ಜವಾಬ್ದಾರಿಯೆ ಸರಿ.

ಮಧ್ಯಪ್ರದೇಶದ ಹೊಲಿಯ-ಕನ್ನಡಿಗರಿಗೆ  ಕನ್ನಡ ಲಿಪಿಯ ಪರಿಚಯಿಸುವ ಜವಾಬ್ದಾರಿ ಯಾರದು?
ಇದು ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕಾರ್ಯ. ಅದಕ್ಕೆ ನಮ್ಮ ರಾಜಕಾರಣಿಗಳ ಮೇಲೆ ಒತ್ತಡ ಹೇರಲೇಬೇಕಿದೆ. ಹೊಲಿಯ ಎಂಬ ಕನ್ನಡದ ಉಪಭಾಷೆಗೆ ಕನ್ನಡ ಲಿಪಿಯ ಪರಿಚಯವಾಗಬೇಕಿದೆ. ಹೊಲಿಯ-ಕನ್ನಡ ಬರೆಯಲು ಓದಲು ಬಳಕೆ ಹೆಚ್ಚಾದಷ್ಟು ಅದರ ಆಯಸ್ಸೂ ಹೆಚ್ಚುತ್ತದೆ. ಹೊಲಿಯ ಭಾಷಿಕರು ಬರೆಯಲು ಹೆಚ್ಚೆಚ್ಚು ತೊಡಗಿದಾಗ ಮಾತ್ರ ಆ ಭಾಷಾಪ್ರಾಕಾರ ಉಳಿಯಲು ಸಾಧ್ಯ. ಕನ್ನಡದ ಈ ಕೊಂಬೆ ಬಲವಾಗಲು ಸಾಧ್ಯ.

ಈಗಾಗಲೇ, 'ಮಾಳವಿ' ಭಾಷೆಯ ವಿಷಯದಲ್ಲಿ ಕನ್ನಡ ಪರಿವಾರಕ್ಕೆ  (ದ್ರಾವಿಡ ಪರಿವಾರ) ಆದ ಅನ್ಯಾಯದ ಪ್ರಸಂಗವನ್ನು ಮೆಲೆಯೇ ತಿಳಿಸಲ್ಪಟ್ಟಿದೆ! ಹೀಗಿರುವಾಗ ಆಘಾತಕಾರಿ ವಿಚಾರ ಎಂಬಂತೆ, ಮಧ್ಯಪ್ರದೇಶ ಈ ಕನ್ನಡಿಗರಲ್ಲಿ ಕೆಲವರು ತಮ್ಮ ತಾಯ್ನುಡಿಯನ್ನು ಮಾತನಾಡುವುದು ಕೀಳರಿಮೆ ಎಂದು ಭಾವಿಸಿ ಹಿಂದಿಯನ್ನು ಬಳಸಲು ಆರಂಭಿಸಿರುವರಂತೆ!
ಇಂಥವರಿಗೂ ಸಹ, ಕನ್ನಡ ಪ್ರಜ್ಞೆ, ಇತಿಹಾಸ ಪ್ರಜ್ಞೆ ಹಾಗು ಭಾಷಾಭಿಮಾನ, ತಾಯ್ನುಡಿಯ ಬಗ್ಗೆ ಸ್ವಾಭಿಮಾನ ಹಚ್ಚುವ ಜವಾಬ್ದಾರಿಯೂ ನಾಡೊಳಗಿನ ಕನ್ನಡಿಗರೇ ಹೊರಬೇಕಿದೆ.
ಈ ಪ್ರದೇಶಗಳಲ್ಲಿಯೂ ಸಹ ಕನ್ನಡ ಶಾಲೆಗಳ ಅವಶ್ಯಕತೆ ಹೆಚ್ಚಿರುವುದಂತು ನಿಜ.

ಇನ್ನು ನಾಡಿನ ಒಳಗೆಯೇ, ಕೊಳ್ಳೆಗಾಲ-ತಿರುಮಕೂಡ್ಲು ಕನ್ನಡ, ಮಳವಳ್ಳಿ ಮಂಡ್ಯ ಕನ್ನಡ, ಕುಂದಾಪ್ರ ಕನ್ನಡ, ಯಾಣ-ಕನ್ನಡ, ಉತ್ತರ ಕರ್ನಾಟಕದ ಝವಾರಿ ಕನ್ನಡ, ಹೀಗೆ ಹಲವು ಸೊಗಡುಳ್ಳ ಎಲ್ಲಾ ಪ್ರಾಂತೀಯ ಶೈಲಿಯ ಕನ್ನಡದ ಸವಿಯನ್ನು ಸಾಹಿತ್ಯದಲ್ಲಿ ಬಳಸಿ ಪ್ರಾಂತೀಯ ಭಾಷಾ ಸೊಬಗನ್ನು ಕಾಪಾಡಿಕೊಳ್ಳಬೇಕಿದೆ. 
ತುಳು ಮತ್ತು ಕೊಡವ ಭಾಷಾ ಸಾಹಿತ್ಯದ ಉನ್ನತಿಯು ಇದೇ ಹಾದಿಯಲ್ಲಿ ಸಾಗಿದರೆ ಉತ್ತಮ.
ಕರ್ನಾಟಕದ ಸುತ್ತಮುತ್ತಲ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರಗಳಲ್ಲಿ ಹಲವು ಕನ್ನಡ ಮಾಧ್ಯಮ‌ ಶಾಲೆಗಳಿದ್ದು, ಅಲ್ಲಿನ ಸರ್ಕಾರಗಳು, ಕನ್ನಡ ಪಠ್ಯ ಪುಸ್ತಕಗಳನ್ನು ಪೂರೈಸಲು ಕರ್ನಾಟಕದ ಸರ್ಕಾರಗಳ ಮೇಲೆ ಅವಲಂಭಿಸಿವೆ! ಆದರೆ ಕರ್ನಾಟಕದ ಸರ್ಕಾರಗಳು ಇದನ್ನು ಕಡೆಗಣಿಸಿ, ಅಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ತ್ರಿಶಂಖು ಸ್ಥಿತಿಗೆ ದೂಡುತ್ತಿದೆ.

ಅಲ್ಲಿನ ಸರ್ಕಾರಗಳಿಗೂ ಸಹ, ತಾವೇ ಪಠ್ಯ ಪುಸ್ತಕಗಳನ್ನು ಪೂರೈಸುವ (ಕರ್ತವ್ಯ) ಸಾಮರ್ಥ್ಯವಿದ್ದರೂ ಸಹ ರಾಜಕೀಯ ಮೇಲಾಟಕ್ಕೆ ಕರ್ನಾಟಕ ಸರ್ಕಾರಗಳನ್ನು ಹೊಣೆ ಮಾಡಿ ಆರೋಪಿಸುತ್ತವೆ. ಇವರ ಜಗಳದಿಂದ ಹೊರನಾಡ ಕನ್ನಡ ವಿದ್ಯಾರ್ಥಿಗಳು ಸಂಕಟಕ್ಕೆ ಸಿಲುಕಿದ್ದಾರೆ!

ಇಂಥ ದರಿದ್ರ ರಾಜಕಾರಣವು ನಿಲ್ಲಬೇಕು. ಈ ಹೊರನಾಡ ಕನ್ನಡ ಮಕ್ಕಳಿಗೆ ಸಮರ್ಪಕವಾದ ವ್ಯವಸ್ಥೆ ಸಿಗುವಂತಾಗಬೇಕಿದೆ.
ಇದಕ್ಕೂ ಸಹ ಒಳನಾಡ ಕನ್ನಡಿಗರು ಹೊರಗಿನ ಕನ್ನಡಿಗರಿಗೆ ನೈತಿಕವಾಗಿ ಬೆಂಬಲವಾಗಿ ನಿಲ್ಲುವುದು ಸಹ ನಮ್ಮ ಜವಾಬ್ದಾರಿಯೆ ಆಗಿದೆ.

ಇನ್ನುಳಿದಂತೆ, ಪಂಜಾಬ್ - ಹರಿಯಾಣ ಮತ್ತು ಪಶ್ಚಿಮ ಬಂಗಾಳದ ಪ್ರಾಂತ್ಯದ ವಿವಿಧ ಭಾಷಾ ಸ್ವರೂಪಗಳು ಹಾಗು ಮೌಖಿಕ ಸ್ವರೂಪಗಳಲ್ಲಿ ಕನ್ನಡಕ್ಕೆ ಬಹುತೇಕ ಹೋಲಿಕೆಯಾಗುವ ಹಲವು ಭಾಷಾ ಪ್ರಾಕಾರಗಳಿದ್ದು ಅವೆಲ್ಲವುದರ ಬಗ್ಗೆಯು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

ದಿಲ್ಲಿಯ ತಮಿಳುನಾಡು ಮೂಲದ ಕನ್ನಡಕಾರರು :-

ಮೂವತ್ತು ವರ್ಷಗಳ ನಂತರ ಪೂರ್ವದಿಲ್ಲಿಯ ತ್ರಿಲೋಕಪುರಿ ಮೊನ್ನೆ ಮತ್ತೊಮ್ಮೆ ಬೆಚ್ಚಿಬೀಳಿಸು ವಂತೆ ಕನಲಿತ್ತು. 1984ರಲ್ಲಿ ಇಂದಿರಾ ಹತ್ಯೆಯ ನಂತರ ಜರುಗಿದ ಸಿಖ್ಖ್ ಸಾಮೂಹಿಕ ಮಾರಣಹೋಮದ ರಣಭೂಮಿ ಆದದ್ದು ಇದೇ ತ್ರಿಲೋಕಪುರಿ ಮತ್ತು ನೆರೆಹೊರೆಯ ಕಲ್ಯಾಣಪುರಿ. ಕಾಂಗ್ರೆಸ್ಸಿನ ತಲೆಯಾಳುಗಳೇ ಈ ಮಾರಣಹೋಮದ ನೇತೃತ್ವ ವಹಿಸಿದ್ದರು. ಕಳೆದ ವಾರ ಅಲ್ಲಿ ಜರುಗಿದ್ದು ಹಿಂದೂ-ಮುಸ್ಲಿಂ ಘರ್ಷಣೆ. 1984ರ ಕಗ್ಗೊಲೆಗಳಿಗೆ ಹೋಲಿಸಿದರೆ ಮೊನ್ನೆ ನಡೆದದ್ದು ತರಚು ಗಾಯವೂ ಅಲ್ಲವೇನೋ. ಆದರೆ ಮತ್ತೊಂದು ಮಹಾ ಮಾರಣಹೋಮಕ್ಕೆ ಯಾರೋ ಮೇಲ್ಪದರ ಗೀರಿ ಕೋಮುವಾದದ ಕಬ್ಬಿಣ ಕಾದಿದೆಯೇ ಎಂದು ಪರಿಶೀಲಿಸಿ ನೋಡುತ್ತಿರುವ ಖಚಿತ ಸೂಚನೆಗಳಿವೆ. ಈ ಕಿಡಿಗೇಡಿತನದಲ್ಲಿ ಉತ್ತರ ಪ್ರದೇಶದ ಮುಝಪ್ಫರ್ ನಗರದ ಕೋಮುಗಲಭೆಗಳ ನೆರಳನ್ನು ಕಾಣುತ್ತಿದ್ದಾರೆ ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕರು.
ನೆಹರೂ ಮತ್ತು ಇಂದಿರಾ ಕಾಲದಲ್ಲಿ ಕೊಳೆಗೇರಿಗಳನ್ನು ಕೆಡವಿದ ನಂತರ ನಿರಾಶ್ರಿತರಾದ ದೀನ ದಲಿತರಿಗೆ ಪುನರ್ವಸತಿ ಕಲ್ಪಿಸಿದ್ದು ಇದೇ ತ್ರಿಲೋಕಪುರಿ ಮತ್ತು ಪಕ್ಕದ ಕಲ್ಯಾಣಪುರಿಗಳಲ್ಲಿ. ಸಂಜಯ ಗಾಂಧಿ ಬುಲ್ಡೋಜರ್ ನೆಲಸಮ ಮಾಡಿದ ತುರ್ಕಮಾನ ಗೇಟಿನ ಕೊಳೆಗೇರಿಗಳ ಬಡ ಮುಸಲ್ಮಾನರನ್ನೂ ಇದೇ ತ್ರಿಲೋಕಪುರಿಗೆ ತಂದು ಒಗೆಯಲಾಗಿತ್ತು. ನೀರು, ಬೆಳಕು, ನೆರಳಿನ ಯಾವುದೇ ನಾಗರಿಕ ಸೌಲಭ್ಯಗಳ ಸುಳಿವೂ ಕೂಡ ಇಲ್ಲದ ಈ ಬರಡು ಬಂಜರು ನೆಲದಲ್ಲಿ ದಲಿತರು, ಹಿಂದುಳಿದವರು, ಮುಸಲ್ಮಾನರು ಕಾಲ ಕ್ರಮೇಣ ತಮ್ಮ ಬಡ ಬದುಕುಗಳನ್ನು ಕಟ್ಟಿಕೊಂಡರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಜನ ಗೆಲ್ಲಿಸಿದ್ದು ಆಮ್ ಆದ್ಮಿ ಪಾರ್ಟಿಯ ಹುರಿಯಾಳನ್ನು. ಲೋಕಸಭೆ ಚುನಾವಣೆ ನಂತರ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳನ್ನು ಗೆದ್ದ ನಂತರವೂ ದಿಲ್ಲಿ ವಿಧಾನಸಭೆ ಗದ್ದುಗೆ ಹಿಡಿಯುವ ವಿಶ್ವಾಸ ಬಿಜೆಪಿಗೆ ಮೂಡಿಲ್ಲ. ಮುಝಫ್ಫರ್ ನಗರದ ಕೋಮುಗಲಭೆಗಳ ಸೂತ್ರ ಇಲ್ಲಿ ಫಲ ನೀಡೀತೇ ಎಂಬ ಪೂರ್ವಭಾವಿ ಪರೀಕ್ಷೆ ಮೊನ್ನೆ ತ್ರಿಲೋಕಪುರಿಯಲ್ಲಿ ನಡೆದಿದೆ.
ಇಂತಹ ತ್ರಿಲೋಕಪುರಿಯಲ್ಲಿ ಐದಾರು ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರಿದ್ದಾರೆ. ಇವರೆಲ್ಲ ತಮಿಳುನಾಡಿನಿಂದ ವಲಸೆ ಬಂದವರು. ಕಳೆದ ಕೆಲವು ವರ್ಷಗಳಿಂದ ಈ ಅಂಕಣಕಾರನ ಮನಸ್ಸನ್ನು ಕಾಡಿರುವ ಜನ ಇವರು. ತಮಿಳರ ಪಾಲಿಗೆ ಇವರು ಕನ್ನಡಕಾರರು. ಆದರೆ ಕನ್ನಡಿಗರು ಈ ಕನ್ನಡಕಾರರ ಇರವನ್ನೇ ಅರಿಯರು. ಹೊರನಾಡ ಕನ್ನಡಿಗರ ವ್ಯಾಖ್ಯೆ ಇವರ ಬಳಿ ಸುಳಿದೇ ಇಲ್ಲ. 1948ರಷ್ಟು ಹಿಂದೆಯೇ ಹುಟ್ಟಿದ ದೆಹಲಿ ಕರ್ನಾಟಕ ಸಂಘಕ್ಕೂ ಕೊಳೆಗೇರಿಯ ಈ ಬಡ ಕನ್ನಡಕಾರರ ಸಂಗತಿ ಗೊತ್ತಿಲ್ಲ.
ಮನೆಗೆಲಸದ ಪಾತ್ರೆ ತಿಕ್ಕುವವರಾಗಿ, ಅಡುಗೆ ಮಾಡುವವರಾಗಿ, ಡ್ರೈವರುಗಳಾಗಿ, ನೆರೆಯ ನೋಯ್ಡಾದ ಫ್ಯಾಕ್ಟರಿಗಳಲ್ಲಿ ಕೂಲಿಕಾರ ರಾಗಿ, ಟ್ರ್ಯಾಫಿಕ್ ಸಿಗ್ನಲ್ಲುಗಳಲ್ಲಿ ಹೂವು ಮಾರುವವ ರಾಗಿ, ಸಣ್ಣ ಪುಟ್ಟ ವ್ಯಾಪಾರ ಮಾಡುವವರಾಗಿ ಹೊಟ್ಟೆ ಹೊರೆಯುತ್ತಿದ್ದಾರೆ ಈ ಕನ್ನಡಿಗರು. ಇವರು ಮಾತನಾಡುವ ಭಾಷೆ ಕನ್ನಡ. ನೂರಕ್ಕೆ ಅರವತ್ತು-ಎಪ್ಪತ್ತು ಪದಗಳು ಕನ್ನಡ, ಉಳಿದವು ತಮಿಳು. ತಮ್ಮ ಮಾತೃಭಾಷೆ ಕನ್ನಡವೆಂದೇ ಹೇಳುತ್ತಾರೆ. ತಮಿಳುನಾಡಿನಲ್ಲಿ ಇವರನ್ನು ಕನ್ನಡ ದೇವಾಂಗ ಚೆಟ್ಟಿಯಾರ್ ಎಂದೇ ಕರೆಯಲಾ ಗುತ್ತದೆ. ನೇಯುವುದು ಇವರ ಮೂಲಕಸುಬು. 1967ರ ಆಜು ಬಾಜಿನಲ್ಲಿ ದಿಲ್ಲಿಗೆ ವಲಸೆ ಬಂದವರಿವರು. ಮೊದಲ ಬಾರಿಗೆ ತಮಿಳು ನಾಡಿನಲ್ಲಿ ಅಧಿಕಾರ ಹಿಡಿದ ಡಿಎಂಕೆ, ವಿದ್ಯುತ್ಚಾಲಿತ ಮಗ್ಗಗಳ ಆರಂಭಕ್ಕೆ ಅನುಮತಿ ನೀಡಿದ ನಂತರ ನಿರ್ಗತಿಕರಾದ ಕೈಮಗ್ಗದ ನೇಕಾರರಿವರು. ವಿದ್ಯುತ್ ಮಗ್ಗಗಳು ತಮ್ಮ ಕಸುಬಿಗೆ ನೀಡಿದ ಕೊಡಲಿಯೇಟನ್ನು ಭರಿಸಲಾರದೆ ಹೊಟ್ಟೆ ಹೊರೆಯಲು ದಿಲ್ಲಿ, ಮುಂಬಯಿ, ಬೆಂಗಳೂರು ರೈಲುಗಳನ್ನು ಹತ್ತಿದ್ದವರು.
''ತಿಂಗಳುಗಳು, ವರ್ಷದೊಪ್ಪತ್ತಿನ ಅಂತರದಲ್ಲಿ ಅಂದಿನ ದಿನಗಳಲ್ಲಿ ದಿಲ್ಲಿಗೆ ಬಂದಿಳಿದ ಕುಟುಂಬಗಳು ಹತ್ತಿರ ಹತ್ತಿರ ಸಾವಿರ ಎನ್ನುತ್ತಾರೆ,'' ನಾಗಲಿಂಗಂ ಕನ್ನಡ ದೇವಾಂಗ ಚೆಟ್ಟಿಯಾರ್. ಒಂಬತ್ತು ವರ್ಷದ ಹುಡುಗನಾಗಿ ಪಂಜಾಬಿ ಚಹಾದ ಅಂಗಡಿ ಯಲ್ಲಿ ಕೆಲಸ ಮಾಡಿ ದಿಲ್ಲಿಯಲ್ಲಿ ಬದುಕು ಕಟ್ಟಿಕೊಂಡವರು ನಾಗಲಿಂಗಂ. ಅವರನ್ನು ಎದುರಿಗೆ ಕೂರಿಸಿಕೊಂಡು ಮಾತನಾಡಿದರೆ ಅವರ ಕನ್ನಡ ನಮಗೆ ಅರ್ಥ ಆಗೋದು ನೂರಕ್ಕೆ ಅರವತ್ತು ಪದಗಳು ಮಾತ್ರವೇ.
ಬೇರೆ ಕಸುಬೇ ಗೊತ್ತಿಲ್ಲದ ಈ ಕನ್ನಡಕಾರರು, ದಿಲ್ಲಿಗೆ ಬಂದ ಆರಂಭದ ದಿನಗಳಲ್ಲಿ ನೆರೆಹೊರೆಯ ಪಾಣಿಪತ್, ಸೋನೆಪತ್, ಘಾಜಿಯಾಬಾದ್ಗಳ ಕೈಮಗ್ಗಗಳಲ್ಲಿ ಕೂಲಿ ಮಾಡುತ್ತಾರೆ. ತಮಿಳು ನಾಡಿನಲ್ಲಿ ತಾವು ನೇಯುತ್ತಿದ್ದ ಸೀರೆಗಳ ಬದಲಿಗೆ ಇಲ್ಲಿ, ದುಪ್ಪಟಿ, ಕಂಬಳಿ ನೇಯುತ್ತಾರೆ. ಈ ಮಗ್ಗಗಳೂ ಅಳಿದ ನಂತರ ಬಾಣಲೆ ಯಿಂದ ಬೆಂಕಿಗೆ ಬಿದ್ದು ಅನ್ನದ ದಾರಿಗಳನ್ನು ಹುಡುಕಿಕೊಳ್ಳುತ್ತಾರೆ.
ಕರೋಲ್ ಬಾಗಿನ ಝುಗ್ಗಿ ಝೋಪಡಿಗಳಿಂದ ತೆರವು ಮಾಡಿಸುವ ಸರಕಾರ ತ್ರಿಲೋಕಪುರಿ, ಮಂಗೋಲ್ ಪುರಿ, ಇಂದ್ರಾಪುರಿಯಲ್ಲಿ ಪುಟ್ಟ ನಿವೇಶನ ನೀಡಿ ಸಾಗಹಾಕುತ್ತದೆ. ಇಂದಿನ ತ್ರಿಲೋಕಪುರಿಯಲ್ಲಿ ನೆಲೆಸಿರುವ ಕನ್ನಡಕಾರರ ಕುಟುಂಬಗಳ ಸಂಖ್ಯೆ ನಾನೂರಕ್ಕೂ ಹೆಚ್ಚು. ಕನ್ನಡ ದೇವಾಂಗ ಚೆಟ್ಟಿಯಾರರ ಕುಲದೈವ ಚೌಡೇಶ್ವರಿ. ಆಕೆಗೊಂದು ದೊಡ್ಡದೇ ಆದ ಗುಡಿ ಕಟ್ಟಿದ್ದಾರೆ.
''ಡೆಲ್ಲಿ ಕನ್ನಡ ಸಂಘ ನಮ್ಮನ್ನು ಕರೆದಿಲ್ಲ, ನಾವು ಅವರ ಬಳಿ ಹೋಗಿಲ್ಲ. ತಮಿಳು ಸಂಘಂಗೆ ಹೋಗಿದ್ದೇವೆ, ಸದಸ್ಯರೂ ಆಗಿದ್ದೇವೆ. ಮಕ್ಕಳು ಡೆಲ್ಲಿಯ ತಮಿಳು ಶಾಲೆಗಳಿಗೆ ಹೋಗಿ ಕಲೀತಾರೆ. ತಮಿಳುನಾಡಿನಲ್ಲಿ ನಮ್ಮ ಸಂಖ್ಯೆ ಹತ್ತಿಪ್ಪತ್ತು ಲಕ್ಷವಾದರೂ ಇದ್ದೀತು. ಕರ್ನಾಟಕದ ಹಂಪಿಯ ದಯಾನಂದ ಸ್ವಾಮಿ ಸರಸ್ವತಿ ಅವರ ಮಠವೇ ನಮ್ಮೆಲ್ಲರ ಮುಖ್ಯ ಮಠ. ತಮಿಳುನಾಡಿನಲ್ಲಿ ನಮ್ಮ ಗುಡಿಗಳ ಉದ್ಘಾಟನೆಗೆ ದಯಾನಂದ ಸ್ವಾಮಿ ಬರ್ತಾರೆ. ತಮಿಳುನಾಡಿನಲ್ಲಿ ನಮ್ಮ ಸಂಸ್ಕೃತಿಯೇ ಬೇರೆ, ತಮಿಳು ಸಂಸ್ಕೃತಿಯೇ ಬೇರೆ. ಉಗಾದಿ ಕನ್ನಡದ ಹಬ್ಬ ಅಂತ ಗೊತ್ತು, ನಾವು ಆಚರಿಸಲ್ಲ, ಯಾಕೆ ಅಂತ ಗೊತ್ತಿಲ್ಲ,'' ಎಂಬುದು ಈ ಕನ್ನಡಿಗರ ಮನದಾಳದ ಮಾತು.
ತಮಿಳುನಾಡಿನಲ್ಲಿ ಕನ್ನಡಿಗ ದೇವಾಂಗ ಚೆಟ್ಟಿಯಾರರು ತಾವು ವಾಸಿಸುವ ಪ್ರದೇಶಗಳನ್ನು ಎರಡು ಸೀಮೆಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಅರವತ್ತೂರು, ಮೂವತ್ತೂರು ಎಂಬ ಎರಡು ಸೀಮೆಗಳಲ್ಲಿ ಅರವತ್ತು ಮತ್ತು ಮೂವತ್ತು, ಒಟ್ಟು ತೊಂಬತ್ತು ನಾನಾ ಊರುಗಳಲ್ಲಿ ಇವರ ವಾಸ. ನೂರಾರು ವರ್ಷಗಳಿಂದ ತಮಿಳುನಾಡಿನಲ್ಲಿ ಬದುಕಿರುವ ಈ ಜನಾಂಗಕ್ಕೆ ತಮ್ಮ ಬೇರುಗಳ ಕುರಿತ ಅರಿವಿಲ್ಲ. ತಾವು ತಮಿಳುನಾಡಿನ ಮೂಲನಿವಾಸಿಗಳೇ ಅಥವಾ ವಲಸೆ ಬಂದವರೇ ಎಂಬುದೂ ಗೊತ್ತಿಲ್ಲ. ಮನೆಮನೆಗಳ ಹೊಸ್ತಿಲುಗಳ ಒಳಗೆ ಕನ್ನಡವನ್ನೂ-ಹೊರಗೆ ತಮಿಳನ್ನೂ ಮಾತಾಡುವ, ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶವೇ ಇಲ್ಲದ, ಪತ್ರ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಿರುವ, ಆದರೆ ಅಂತಹ ಕನ್ನಡವನ್ನು ತಮಿಳು ಲಿಪಿಯಲ್ಲೇ ಬರೆಯುವ ಅನಿವಾರ್ಯಕ್ಕೆ ಸಿಕ್ಕಿರುವ ತಮಿಳು ನೆಲದ ಈ ಕನ್ನಡಕಾರರನ್ನು ಅನಾಥಪ್ರಜ್ಞೆ ಕಾಡಿದೆ. ತಮ್ಮ ಅಸ್ಮಿತೆ ಯಾವುದೆಂದು ತಿಳಿಯದ ತೊಳಲಾಟದಲ್ಲಿದ್ದಾರೆ. ದಿಂಡಿಗಲ್, ಮಧುರೈ, ವಿರುಧುನಗರ, ಶಿವಕಾಶಿ, ಸೇಲಂ, ಕೊಯಮತ್ತೂರು, ಈರೋಡು, ಕಾರೈಕುಡಿ, ಪ್ರದೇಶಗಳಲ್ಲಿ ನೆಲೆಸಿರುವ ಇವರಿಗೆ ವಿರುಧುನಗರ ಜಿಲ್ಲೆಯ ಅರಪ್ಪುಕೋಟೈ ಎಂಬಲ್ಲಿ ತಮ್ಮದೇ ಜನಾಂಗ ನಡೆಸುವ ಶಿಕ್ಷಣ ಸಂಸ್ಥೆಗಳಿವೆ. ಆದರೆ ಅಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ಇಲ್ಲ. ಈ ಕನ್ನಡಕಾರರ ಕನ್ನಡ ತಮಿಳುನಾಡಿನಲ್ಲೇ ಒಂದು ಸೀಮೆಯಿಂದ ಇನ್ನೊಂದು ಸೀಮೆಗೆ ಬದಲಾಗುತ್ತದಂತೆ.
ತ್ರಿಲೋಕಪುರಿಯಲ್ಲಿ ಕಿವಿ ಮೇಲೆ ಬಿದ್ದ ಕನ್ನಡದ ತುಣುಕಿನ ಮಾದರಿ ಹೀಗಿತ್ತು- ''ಓಯಿ ನೋಡು ಅತ್ತೆ ಬತ್ತಾರಾ ಅಂತಾ... ಕಾವೇರಿಯಕ್ಕನ ತಮ್ಮ ಕೂಡ ಬತ್ತಾನಾ...? ಸರಿ ಸರಿ, ದೈರ್ಯಿಯವಾಗಿ ಹೋಗು, ಪತ್ರ ಕೊಟ್ಟಾರೆ ಕೈಯೆಳುತ್ತು ಆಕಬ್ಯಾಡಾ... ನಿನ್ನೆ ನೈಟೇ ಅವರ್ ಮಗಳಿಗೆ ಫೋನು ಆಕಿದ್ದೆ. (ಹೋಗಿ ನೋಡು ಅತ್ತೆ ಬರ್ತಾರಾ ಅಂತಾ... ಕಾವೇರಿಯಕ್ಕನ ತಮ್ಮ ಕೂಡ ಬರ್ತಾನಾ? ಸರಿ ಸರಿ, ಧೈರ್ಯವಾಗಿ ಹೋಗು. ಪತ್ರ ಕೊಟ್ರೆ ಅದಕ್ಕೆ ಸಹಿ ಹಾಕಬೇಡ... ನಿನ್ನೆ ರಾತ್ರಿಯೇ ಅವರ ಮಗಳಿಗೆ ಫೋನು ಮಾಡಿದ್ದೆ).
ಭಾಷಾಶಾಸ್ತ್ರಜ್ಞ ರಾ ಗೋಪಾಲಕೃಷ್ಣ ಅವರು ಹೇಳುವಂತೆ, ''ತಮಿಳುನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮೊದಲಿನಿಂದ ಕನ್ನಡಿಗರು ಹರಡಿಕೊಂಡಿದ್ದಾರೆ. ಇವರಲ್ಲಿ ಹಲವರು ಅಲ್ಲಿನ ಮೂಲ ನಿವಾಸಿಗಳು ಮತ್ತು ಹಲವರು ವಲಸೆಗಾರರು. ಇವರು ತಮ್ಮ ಮಾತೃಭಾಷೆಗಳನ್ನು ಶತಶತಮಾನಗಳಿಂದ ಉಳಿಸಿಕೊಂಡಿದ್ದಾರೆ. ತಮಿಳುನಾಡಿನ ಪ್ರಭಾವದಿಂದಾಗಿ ಇವರ ಆಡುಮಾತಿನಲ್ಲಿ ತೀರಾ ಬದಲಾವಣೆಗಳು ಉಂಟಾಗಿವೆ. ತಮಿಳು ಪದಗಳು ಹೇರಳವಾಗಿ ಅವರ ಆಡುಮಾತಿನಲ್ಲಿ ಸೇರಿಕೊಂಡಿವೆ. ವ್ಯಾಕರಣಾತ್ಮಕವಾಗಿಯೂ ತಮಿಳಿನ ಪ್ರಭಾವ ಎದ್ದುಕಾಣುತ್ತದೆ. ಇದು ವಿದ್ಯಾವಂತರ ಆಡು ನುಡಿಯಲ್ಲೂ ಎದ್ದು ಕಾಣುತ್ತದೆ.''
ಮಧುರೈ ಕಾಮರಾಜನಾಡಾರ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪಾ ಶ ಶ್ರೀನಿವಾಸ ಹೇಳುತ್ತಾರೆ- ''ಸಂಗಮ ಕಾಲದಲ್ಲಿ ಮೈಸೂರು 'ಎರುಮೈನಾಡು' ಎಂದೇ ಪ್ರಸಿದ್ಧವಾಗಿತ್ತು. 'ಅಗನಾನೂರು' ಎಂಬ ತಮಿಳು ಪ್ರಣಯ ಕವಿತಾ ಸಂಕಲನದಲ್ಲಿ ನೀಲಗಿರಿಯ ವಡಗರನ್ನು ಮೈಸೂರು ಅರಸರ ಸಂಬಂಧಿಕರೆಂದು ಉಲ್ಲೇಖಿಸಲಾಗಿದೆ. ಪಾಂಡ್ಯ ಅರಸ ಶಡೈಯನ್ ಪರಾಂತಕನ ವೇಳ್ವಿಕುಡಿ ಶಾಸನದಲ್ಲಿ ಕ್ರಿ.ಶ.6ನೇ ಶತಮಾನದಲ್ಲಿ ಪಾಂಡ್ಯ ದೇಶವನ್ನು ಸ್ವಾಧೀನಪಡಿಸಿಕೊಂಡು ಕಳಭ್ರ ಹೆಸರಿನ ಕನ್ನಡ ಅರಸರು ಆಳಿಕೊಂಡಿದ್ದರು ಎಂದು ಹೇಳಲಾಗಿದೆ. ಕ್ರಿ.ಶ.2-3ನೇ ಶತಮಾನದ 'ಶಿಲಪ್ಪದಿಕಾರಂ'ನಲ್ಲಿ ನೀಲಗಿರಿ ಯಲ್ಲಿ ಕರು ನಾಡರ್ ಆಡಿದ ನೃತ್ಯದ ಬಗ್ಗೆ ವಿವರವಿದೆ. ಕ್ರಿ.ಶ.10ನೇ ಶತಮಾನದ ಗುಣ ಸಾಗರನ ಕೃತಿಯಲ್ಲಿ 'ಗುಣಗಾಂಕಿಯಂ' ಎಂಬುದು ಕರ್ನಾಟಕದ ಛಂದಸ್ಸು ಎಂದು ಹೇಳಲಾಗಿದೆ, ಕನ್ನಡದ ಅರಸರು ಸಾಮ್ರಾಜ್ಯ ವಿಸ್ತರಣೆಗಾಗಿ ತಮಿಳರೊಂದಿಗೆ ಹೋರಾಡು ವಾಗ ವಿವಾಹ ಸಂಬಂಧಗಳನ್ನು ಏರ್ಪಡಿಸಿಕೊಂಡಿದ್ದರು. ಕಂಚಿಯ ಪಲ್ಲವ ಅರಸ ಕಳರ್ ಎಂಬುವವನು ರಾಷ್ಟ್ರಕೂಟ ಅರಸ ಅಮೋಘ ವರ್ಷನ ಮಗಳನ್ನು ಮದುವೆಯಾಗಿದ್ದ. ಹೊಯ್ಸಳ ಅರಸ ಮಾಮಡಿಗೆ ಪಾಂಡ್ಯ ಮತ್ತು ಚೋಳರೊಡನೆ ವೈವಾಹಿಕ ಸಂಬಂಧವಿತ್ತು.''

  ದಿಲ್ಲಿಯ ಕನ್ನಡಕಾರರು :- ಮೂಲ :- http://m.vijaykarnataka.com/edit-oped/columns/-/articleshow/45014835.cms


ಹೀಗೆ, ಕನ್ನಡ-ಕನ್ನಡಿಗ-ಕರ್ನಾಟಕ ಜೊತೆಗೆ ಹೊರನಾಡ ಕನ್ನಡಿಗರು ಮತ್ತು ನಮ್ಮ ಕನ್ನಡದ ಉಪಭಾಷೆಗಳೆಲ್ಲವೂ ಸಮೃದ್ಧವಾಗಿ ಬೆಳೆದರೆ, ಕನ್ನಡವೆಂಬುದು ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಕನ್ನಡದ ಸುತ್ತಲೂ ತನ್ನ ಕೂಸುಗಳು (ಉಪಭಾಷೆಗಳು) ಬೆಳೆದು ನಿಂತರೆ, ಕನ್ನಡದ ಗಟ್ಟಿತನ, ಗಾಢತೆ, ವ್ಯಾಪ್ತಿ ಹಿರಿದಾಗುತ್ತದೆ. ಆಗ ನಿಜಕ್ಕೂ "ಸಿರಿಗನ್ನಡಂ ಗೆಲ್ಗೆ" ಎಂಬ ಮಾತು ಜೀವ ಪಡೆಯುತ್ತದೆ.
ಸಿರಿಗನ್ನಡಂ ಗೆಲ್ಗೆ......


ಲೇಖಕರು:- ಇಮ್ಮಡಿ ಪುಲಕೇಶಿ