ಗುರುವಾರ, ಆಗಸ್ಟ್ 11, 2016

ವಚನ ಸಾಹಿತ್ಯ ಕನ್ನಡಕ್ಕೆ ಹೆಮ್ಮೆಯೂ ಹೌದು! ಅದರಲ್ಲಿಯ ಹೊಲಯ ಮಾದಿಗ ಹೆಸರುಗಳ ನಿಂದನೆ ಆದಿ ಕನ್ನಡಿಗರಿಗೆ ಆದ ದ್ರೋಹವೂ ಹೌದು!

(ಒಂದು ಅದ್ಭುತ ಬರವಣಿಗೆ. ಓದಲು ಸ್ವಲ್ಪ ಸಮಯ ಹಿಡಿಸಬಹುದು. ಸಮಯ ಮಾಡಿಕೊಂಡು ಓದಿ. ಇದು ಓದಲೇಬೇಕಾದ ಒಂದು ಅಪರೂಪದ ಬರವಣಿಗೆ)

ಪದಾರ್ಥ ಇತಿಹಾಸ ಭಂಜನ




ಲೇಖಕರು :- ಮಾದು ಕ್ಯಾತಘಟ್ಟ



ಎರಡೂವರೆ ವರ್ಷದ ಹಿಂದೆ ಕೊರಟಗೆರೆಯ ಒಂದು ಗ್ರಾಮಕ್ಕೆ ಸ್ನೇಹಿತ (ಪ್ರದೀಪ್ ಬಸಯ್ಯ) ಮನೆಗೆಂದು (ಊರ ಹಬ್ಬಕ್ಕೆ) ನಾನು ಮತ್ತು ನನ್ನ ಸ್ನೇಹಿತರಿಬ್ಬರು ಹೋಗಿದ್ದೆವು.
ಈಗ ಆ ಸ್ನೇಹಿತ ಇಲ್ಲ! ಕಾಲನಾಗಿದ್ದಾನೆ!
ಆ ವಿಷಯ ಪಕ್ಕಕ್ಕಿರಲಿ.
ಆ ಊರಿಗೆ ಹೋಗಿ ಹಬ್ಬ ಮುಗಿದ ಮಾರನೆಯ ದಿನ, ಎಲ್ಲಾ ಬೆಂಗಳೂರಿಗೆ ಹಿಂತಿರುಗಯತಿದ್ದಾಗ, ಮೂರ್ನಾಲ್ಕು ಕಾರುಗಳು ಬಂದು ಊರ ಬಾಗಿಲ ಬಳಿ ಇಳಿದವು.
ಒಂದು ಮೂವರು ಪಾದ್ರಿಗಳು(Christian) ಕಾರಿನಿಂದ ಇಳಿದರು.
ಊರ ಹಿರಿಯರೆಲ್ಲರೂ ಇಡೀ ಆ ಊರಲ್ಲೇ ಚೆನ್ನಾಗಿರುವ ಒಳ್ಳೆ ಸ್ಥಿತಿಯಲ್ಲಿರು ಆ ಊರಿನ ಒಂದು ಭವನಕ್ಕೆ ಹೋಗುವುದ ಕಂಡು, ನನಗೂ ಕುತೂಹಲವಾಗಿ "ಇರ್ರೊ ಇದೇನಾಗತ್ತೆ ನೋಡ್ಕೊಂಡೆ ಹೋಗೋಣ" ಅಂತ ಅಲ್ಲೆ ಉಳಿಸಿದೆ.
ಪಾದ್ರಿಗಳು ಮತ್ತು ಅವರ ಜೊತೆಗಾರರು, ಅದೇ ಭವನದ ಬಳಿ ಬಂದರು!
ನನಗೆ ಆ ಸಮುದಾಯ ಭವನ ನೋಡಿದಾಗಲೆ ತಿಳಿದದ್ದು ನಮ್ಮ ಪ್ರದೀಪ ಮಾದಿಗರ ಮನೆ ಮಗ ಎಂದು! ಅದು ನಗಣ್ಯ! ಸ್ನೇಹಾನ ಏನ್ ಜಾತಿ ನೋಡ್ ಮಾಡಕ್ಕಾತ್ಯೆ! ಅಂತ ಕಿತ್ತೋದ ಮನಸ್ಸು ನಮಗಿಲ್ಲ ಬಿಡಿ! ಮುಂದಿನ ವಿಚಾರಕ್ಕೆ ಬರುವ!
ಊರ ಹಿರಿಯರೆಲ್ಲರೂ ಆ ಪಾದ್ರಿಗಳನ್ನು ಗೌರವದಿಂದಲೇ ಬರಮಾಡಿಕೊಂಡರು. ಎಲ್ಲಾ ಕುಳಿತು ಏನೇನೊ ಮಾತಾಡಲು ಶುರು ಮಾಡಿದರು.

(ಇಡೀ ಮಾದಿಗೇರಿಯ ಜನರನ್ನೇ ಸಾಮೂಹಿಕ ಮತಾಂತರ ಮಾಡವ ಯೋಚನೆಯೊಂದಿಗೆ ಅವರು ಬಂದಿದ್ದರು).
ಓರ್ವ ಪಾದ್ರಿ ಮೆಲ್ಲು ಧನಿಯಲ್ಲೇ ಆರಂಭಿದಿದ "ನೋಡಿ ಜನರೆ ನಾವು ನೀವೆಲ್ಲರೂ ಒಂದೆ. ದೇವಮಾನವ ಕ್ರಿಸ್ತನು ನಮ್ಮೆಲ್ಲರನ್ನು ಸಮನಾಗಿ ಕಾಣುತ್ತಾನೆ. ಹಿಂದೂಗಳಾಗಿ ಹುಟ್ಟಿ ನೀವು ತಪ್ಪು ಮಾಡಿದ್ದೀರಿ. ಆದರೆ ಆ ತಪ್ಪನ್ನು ಹಾಗೆಯೇ ಬಿಡಬಾರದು. ಅದನ್ನು ಸರಿ ಮಾಡಿಕೊಳ್ಳರು ಯೇಸುವು ನಿಮ್ಮೆಲ್ಲರಿಗೂ ಒಂದು ಅವಕಾಶ ಕಲ್ಪಿಸಿಕೊಡುತ್ತಿದ್ದಾನೆ" ಹಾಗೆ ಹೀಗೆ ಎಂದೆಲ್ಲ ಏನೇನೊ ಹೇಳುತ್ತಿದ್ದರು!

ನನಗೆ ಈಗಿನಂತೆ ಆ ವಿಚಾರಗಳಲ್ಲಿಯೆಲ್ಲ ಹೆಚ್ಚಿನ ಆಸಕ್ತಿ ಇಲ್ಲದಿದ್ದರಿಂದ ಅವರು ಹೇಳುತ್ತಿದ್ದ ಉದ್ದುದ್ದ ಭಾಷಣಗಳು ನೆನಪಿಲ್ಲ!
ಆದರೆ ಇದಾದ ನಂತರವು ಬೆಂಗಳೂರು ನಗರದ ಒಂದು Slumನಲ್ಲಿ, ಒಡ್ಡರು(Bhovis) ಅವರನ್ನು ಮತಾಂತರ ಮಾಡುವ ಮುಂಚೆಯೂ ಸಹ, "ಹಿಂದುವಾಗಿ ಹುಟ್ಟುವುದೇ ತಪ್ಪು ಅದೊಂದು ಮಹಾಪಾಪ! ಅದನ್ನು ಸರಿ ಮಾಡಬೇಕು" ಎಂಬ ಅರ್ಥದಲ್ಲೇ ಭಾಷಣ ಮಾಡಿದ್ದನ್ನು ಕೇಳಿದ್ದ ಕಾರಣ ಇಂಥ ಕೆಲವು ವಾಕ್ಯಗಳನ್ನು ಮರೆಯಲಾಗದು!
ತುಂಬ ಸಮಯದ ನಂತರ, ಅದೇನೇನೊ ಮಾತಾಡಿ, ಕಡೆಗೆ ಎಲ್ಲರಿಗೂ ಮಟನ್ ಬಿರಿಯಾನಿ ಮಾಡಿಸಿ ಹಂಚಿ ತಿಂದು ಹೋದರು.
ನಾವು ಸಹ ತಿಂದು, ಬೆಂಗಳೂರಿಗೆ ಹಿಂತಿರುಗಿದವು.
ಬಹಳ ದಿನಗಳ ನಂತರ ಈ ವಿಷಯ ಮರೆತೆವು. ಪ್ರದೀಪ್ Bike - Lorry accidentನಲ್ಲಿ ತೀರಿಕೊಂಡ!
ಆ ಊರಿನ ಕಥೆ ಏನಾಯ್ತೋ ಗೊತ್ತಿಲ್ಲ!
ಅದಾದ ನಂತರ, ನನಗೆ ತಿಳಿದಿರುವ ಗ್ರಾಮವೊಂದರಲ್ಲೆ ಇಂಥದ್ದೇ ಹೋಲುವ ಸನ್ನಿವೇಶವೊಂದಿ ಎದುರಾಯ್ತು.

ನನಗೆ ದೊಡ್ಡಪ್ಪ ಆಗಬೇಕು ಸಂಬಂಧದಲ್ಲಿ. ಅವರ ಊರಿಗೆ ಪಟ್ಲಮ್ಮನ ಹಬ್ಬಕ್ಕೆಂದು ಹೋಗಿದ್ದೆ.
ಹಬ್ಬ ಮುಗಿದ ಮಾರನೆಯ ದಿನ, ಬೌದ್ಧ ಬಿಕ್ಕುಗಳು ಜೊತೆಗೆ ಅವರ ಜೊತೆಗಾರರು ಐಷರಾಮಿ ಕಾರುಗಳಿಂದ ಇಳಿದರು!
ನಮ್ಮ ದೊಡ್ಡಪ್ಪನ ಮನೆ ಬಾಗಿಲಿಗೆ ಯಾರೊ ಒಬ್ಬ ಬಂದು "ಬೋರಣ್ಣ! ಅಂಬೇಡಿಕರ್ ಭವನುದ್ ತಕ್ ಬಣ್ಣ! ದ್ಯಾವಣ್ಣ ಕರಿತಾವ್ನೆ! ಯಾರೋ ಕಾರಲ್ ಸ್ವಾಮಿಗೊಳ್ ಬಂದವ್ರೆ" ಎಂದರು.
ನಮ್ಮ ದೊಡ್ಡಪ್ಪನೂ ಎದ್ದು ಹೋದರು!
ಜೊತೆಗೆ ನಾನೂ ಹೋದೆ!

ಮೇಲಿನ ಸನ್ನಿವೇಶ ಇಲ್ಲಿಯೂ ಸಹ ಆ ಗ್ರಾಮದ ಇಡೀ ಹೊಲಗೇರಿಯನ್ನೆ ಮತಾಂತರ ಮಾಡುವ ಯೋಚನೆ ಅವರದ್ದಾಗಿತ್ತು!
ಅಂಬೇಡ್ಕರ್ ಭವನದಲ್ಲಿ ಕುಳಿತರು ಎಲ್ಲರು. ಅದೇ ಊರಿನ ಬಾಲಕ ಒಬ್ಬ ಭವನದೊಳಗಿದ್ದ ಅಂಬೇಡ್ಕರ, ಮಲೆಮಹದೇಶ್ವರ, ಮಂಟೇಸ್ವಾಮಿ, ರಾಮಾನುಜಚಾರ್ಯ, ಗ್ರಾಮದೇವತೆ ಪಟ್ಲಮ್ಮ, ಬುದ್ಧನ ಚಿತ್ರಪಟಗಳನ್ನು ಒರೆಸಿ, ಹೂ ಮುಡಿಸಿ, ಎರಡು ದೀಪಾಳೆ ಕಂಬಗಳನ್ನು ಹಚ್ಚಿದನು.
ಮಾತು ಶುರುವಾಯಿತು! ಬಿಕ್ಕುಗಳು ಪಾಳಿಯಲ್ಲಿನ ಎರಡು ಸಾಲುಗಳ ಮೂಲಕ ಮಾತನ್ನು ಶುರು ಮಾಡಿ, ಬುದ್ಧಂ ಶರಣಂ ಗಚ್ಛಾಮಿ ಎಂದು ಮಾತು ಮುಗಿಸಿದರು! ಮತಾಂತರದ ಬಗ್ಗೆ ಏನನ್ನು ಮಾತಾಡಲಿಲ್ಲ!
ನಂತರ ಅವರ ಜೊತೆಗಾರರು (ಸಾಮಾನ್ಯರು) ಅವರಲ್ಲೊಬ್ಬ ಅದ್ಭುತ ಮಾತುಗಾರ ಇದರ ಬಗ್ಗೆ ಮಾತು ಶುರು ಮಾಡಿದ! "ಹಿಂದೂ ಧರ್ಮ ಗುಲಾಮಗಿರಿಯ ಸಂಕೇತ! ಹಿಂದೂ ಎಂದರೆ ಗುಲಾಮ, ನಮ್ಮ ಮೂಲ ಧರ್ಮ ಬೌದ್ಧ ಧರ್ಮ! ಈಗ ನಾವೆಲ್ಲರೂ ನಿರ್ಧರಿಸುವ ಸಮಯ ಬಂದಿದೆ!
ಅಂಬೇಡ್ಕರ್ ಹಾದಿಯಲ್ಲಿಯೇ ಮತಾಂತರವಾಗಬೇಕಿದೆ" ಎಂದು ಇನ್ನು ಏನೇನೊ ಹೇಳುತ್ತ ಮಾತು ಮುಗಿಸಿದ!
ಎಲ್ಲರಿಗೂ ParleG Biscuit ಬಾಳೆ ಹಣ್ಣು ಮತ್ತು Rasna ಕೊಟ್ಟರು. ಬಿಕ್ಕುಗಳು ಎಲ್ರಿಗು ವಂದನೆಗಳನ್ನು ಹೇಳಿ ಎದ್ದು ಹೋಗಲು ಮುಂದಾದರು!

ಅದೇ ಸಮಯಕ್ಕೆ ಆ ಬಿಕ್ಕುಗಳ ಜೊತೆಗಾರನೊಬ್ಬ "ಏನ್ ಹೇಳ್ತಿರಣ್ಣ! ಏನ್ ದೇವಣ್ಣ? ಏನ್ ಬೋರಣ್ಣ?" ಎಂದರು!
"ನೋಡುಮ ಆದ್ರಾಯ್ತು! ಸ್ವಾಮಿಗಳು ಎಲ್ಲೊ urgentಅವ್ರೆ ಕಳಿಸ್ಕೊಡಪ್ಪ. ಆಮ್ಯಾಲ್ ಕಂತ್ ಮಾತಾಡುದ್ರಾಯ್ತು" ಅಂದ್ರು ದೇವಣ್ಣ!
"ಅವರಿಗೇನು ಅವಸರ ಇಲ್ಲಣ್ಣ. ನಿಮ್ಮ ಸೇವೆಗೆ ಅವರು ಸದಾ ಸಿದ್ಧ ಏನ್ ಹೇಳಿ ಪರವಾಗಿಲ್ಲ" ಎಂದ!
ಬಿಕ್ಕುವಿನ ಮುಖದಲ್ಲಿ ಸಣ್ಣ ನಗು!
ನಮ್ ದೊಡ್ಡಪ್ಪ ಬೋರಣ್ಣ ಮಾತು ಶುರು ಮಾಡ್ದ " ನೋಡಣ್ಣ ಈಗಾಗ್ಬೇಕಿರ ಗ್ಯಾಮೆಗೊಳೆ ಬೇಕಾದಷ್ಟು ಬಿದ್ದವೆ ಇದೆಲ್ಲ ನಮುಗ್ಯಾಕಪ್ಪ! ನೀರುನ್ tank ಹೊಡ್ದೋಗಿ ೨ ವಾರ ಆಯ್ತಲ್ಲ, ಅದ ಸರಿ ಮಾಡ್ಸಿದ್ಬುಟ್ಬುಟ್ಟು ಇದೇನೋ ಮಾಡ್ತಿದ್ಯಲ್ಲಲ!" ಎಂದ.
ಅದ್ಬುಡಣ್ಣ! ನಾಳೆ ನಾಳಿದ್ರಲ್ ಮಾಡ್ಸಿದ್ರಾಯ್ತು! ಅಂತ ಪ್ರತ್ಯುತ್ತರ ಕೊಟ್ಟ!
ಬ್ಯಾಡ ಕಣಣ್ಣ! ಈ ಮತಾಂತ್ರ ಗಿತಾಂತ್ರ ಎಲ್ಲಾ ಬ್ಯಾಡ ಬುಡು! ಎಲ್ಲಾ ಹಿಂಗೆ ಆದ್ರೆ ನಮ್ ಹೆಸ್ರು ಕುಲ ಜಾತಿ ಉಳ್ಸೋರ್ಯಾರ? ಬೆಳ್ಸೊರ್ಯಾರ???
ಎಲ್ಲಾರು ದುಡ್ದು ದುಡ್ದು ದೊಡ್ಡೋರಾದ್ರೆ ನಾವಿಂಗೆ ಮತಾಂತ್ರ ಅದು ಇದು ಅಂತ ಅಲಿಯುದ?
ನಾಮ್ ಉದ್ದಾರ ಆಗಿ, ನಮ್ಮಂಗೆ ಕಷ್ಟ ಪಡೋರ್ಗ ಒಂದಷ್ಟು ಸಹಾಯ ಮಡಿ, ಮಕ್ಕಳು ಮೊಮ್ಮಕಳ ಓದ್ಸಿ, ಎಲ್ಲರೂ ನಮ್ಮಂಗೆ, ಎಲ್ಲರು ಸಮಾನ್ರು ಅಂತ ಬುದ್ಧಿ ಕಲಿಯೋದು ನಾವು ಅಂಬೇಡ್ಕರ್ಗೆ ಮಾಡೊ ಋಣಸಂಧಾಯ, ಏನ್ ನೀನು ಹೆಳ್ದಂಗ್ ಮಾಡ್ಬುಟ್ರೆ ಏನ್ ಮಹಾ ಉಪ್ಕಾರ ಆದೋದದು ನಮ್ಗೆ? ಈ ಭವನದಲ್ಲಿ ಅಂಬೇಡ್ಕರ್ ಮಂಟೇಸ್ವಾಮಿ ಮಹದೇಶ್ವರ, ರಾಮಾನುಜಚಾರ್ಯ, ಬುದ್ದ ಪಟ್ಲಮ್ಮನ ಪೋಟೊಗಳವೆ! ನೀನೇಳ್ದಂಗ್ ಮಾಡುದ್ರೆ ಬುದ್ದಂದು ಅಂಬೇಡಿಕರ್ದು ಬಿಟ್ಟು ಮಿಕ್ಕವ್ನೆಲ್ಲ ಕಿತ್ತೆಸಿಬೇಕಾಯ್ತದೆ! ಅಂತ ಕರ್ಮ ಯಾಕಪ್ಪ!?
ತಿಳಿಲಿಲ್ಲ ಕಾಣ್ಲಿಲ್ಲ! ಅಂತ ಮತಾಂತ್ರ ಯಾಕೆ?
ಜೀವನ ಹೆಂಗ್ ಮಾಡುದ್ ನಾವು?
ನಮ್ಮ ಸಂಸ್ಕೃತಿ ಆಚಾರ ಪದ್ಧತಿ ಸಂಪ್ರದಾಯ ಬುಟ್ಟು ಅದೇನು ಕಾಣ್ದೆ ಇರು ಬುದ್ಧನಾಗಿ ಅದೇನ್ ಕಿಸಿಮೊ ನಾಮು? ಅಂಬೇಡಿಕರ್ ಅಷ್ಟ ಆ ದರ್ಮುದ್ ಬಗ್ಗೆ ಓದು ತಿಳ್ದು ಆ ಧರ್ಮಕ್ಕೆ ಆಚಾರುಕ್ಕೆ ನಿಷ್ಠೆ ನೇಮದಿಂದ ನಡ್ಕಂಡು ಇರುಕಾದದ ನಾವು? ನಮ್ಮತನ ನಮ್ಮ ಜನ ಅನ್ನು ಮರ್ಯಾದೆ ಬ್ಯಾಡ್ವ? ನಮ್ ಹಿರಿಕ್ರು ಬಿತ್ತಿದ್ನೆ ಬೆಳೆಯಾಕ್ ಹೇಳ್ಕೊಟ್ಟವ್ರೆ! ಅದೇ ನಮ್ ಕುಲ ಧರ್ಮ! ಹಾದಿ ಬೀದಿಲೋಗೆರೆಲ್ಲ ನಮ್ಮ ಕೀಳಂದರಾ? ಅವ್ರು ಕೀಳಂದ್ರು ನಾವು ಅದ ಮನ್ಸುಗ್ ಹಾಕಳವರ್ಗು ನಾವ್ ಕೀಳಾಗೊಲೊ!
ನಮ್ ಹಿರಿಕ್ರು ಎಲ್ಲ ಹುಲಿಗೊಳ್ ಬಾಳ್ದಂಗ್ ಬಾಳವ್ರೆ! ತಾವ ಕೀಳು ಅಂತ ಒಪ್ದೋರಲ್ಲ ಅವ್ರು!
ನೆಲವೇ ಹರ ಹರಿವ ನೀರೆ ಹರಿ ಅಂತ ಹರಿಹರರ ಆರಾಧಿಸವ್ರೆ! ಅಮ್ಮ ತಾಯಿ ನೀನೆ ಗತಿಯವ್ವ ಅಂತ ಊರಮ್ಮನ ಹಬ್ಬ ಮಾಡಿ ನಮಗೂ ಆಚಾರ ಸಂಸ್ಕೃತಿ ಕೊಟ್ಟವ್ರೆ! ಬೆವರ ಹರಿಸಿ ಹೊಲದಾಗ ದುಡುದ್ರೆ ಹೊಲಯನ್ನ ಹೊಲಾನೆ ಸಾಕ್ತದೆ ಅಂದವ್ರೆ! ಯಾಕ? ನಾಮ್ ಚೆನ್ನಾಗಿರುದ್ ನಿಂಗ್ ಇಷ್ಟಿಲ್ವ? ಗುಲಾಮ್ರ್ ಯಾಕದು ನಾಮು? ದುಡುದ್ ತಿಂತಾಯ್ಲಿಲ್ವ? ಎಲ್ರೂ ಗುಲಾಮ್ರೆ! ಈಗ್ ನೀನ್ ನಮ್ಮೂರ್ ಬಾಗ್ಳುಗ್ ಬಂದಿಲ್ವ? ನಾವು ಭೂಮ್ ತಾಯಿಗ್ ಗುಲಾಮ್ರು! ನೀನು ಬಿಕ್ಕುಗೊಳ್ಗೆ ಗುಲಾಮ!
ಇತ್ಲಾಗ್ ಮನೆಗೂ ಅಲ್ಲ ಅತ್ಲಾಗ್ ಸುಡ್ಗಾಡ್ಗು ಅಲ್ಲ ಅನ್ನುವಂಗ್ ಆಯ್ತದೆ ನಮ್ ಕಥೆ! ಕರ್ಕ ಹೋಗಪ್ಪ! ಲೋ ಮೊಗ, ಎರಡು ಗೊನೆ ಬಾಳೆನು, ಒಂದ್ ಇಪ್ಪತ್ ಅಚ್ ಬೆಲ್ಲಾನು ತಕ ಬಾಲ" ಅಂತ ನಮ್ಮ ದೊಡ್ಡಪ್ಪ ಮಳೆ ಊಯ್ದ್ ನಿಂತಂಗೆ, ಆ ಬಿಕ್ಕುಗಳನ್ನು ಗೌರವನ್ವಿತವಾಗಿಯೇ ಮಾತಾಡಿ ಕಳಿಸ್ಕೊಟ್ಬುಟ್ರು!
ಈಗ ಈ ವಿಷಯ ಯಾಕೆ ಅಂತ ಹೇಳೇ ಹೇಳ್ತೀನಿ ಮುಖ್ಯ ವಿಚಾರ ಇರೋದೆ ಇಲ್ಲಿ!



ಅದಕ್ಕು ಮುಂಚೆ ಮೇಲಿನ ವಿಚಾರದ ಬಗ್ಗೆ "So called proud Hindu"ಗಳಿಗೆ ಉಪದೇಶ ಕೊಡಬೇಕಿದೆ!
ವರ್ಣೀಯ ಹಿಂದೂಗಳು ತಮ್ಮ ಹುಸಿ ಮೇಲರೆ ಹೆಚ್ಚಿಸಿಕೊಳ್ಳಲು ಅವರ್ಣೀಯ ಹಿಂದೂಗಳನ್ನು ತುಳಿದದ್ದು ನಿಜವೆ!
ಆದರೆ ಇಂದು ಹಿಂದೂ ಸಮಾಜದ ಸ್ವಾಸ್ಥ್ಯವೇ ಹಾಳಾಗಿ, ಧರ್ಮಕ್ಕೆ ಪೆಟ್ಟು ಬೀಳುವಂತಾದಾಗಲೂ ಹಳೇ ಮೌಢ್ಯಗಳಿಗೇ ತಲೆ ಬಾಗಿ ಒಂದಾಗದೆ ಇರುವುದೇ ಇಷ್ಟಕ್ಕೆಲ್ಲಾ ಕಾರಣ!
ಈ ಮತಾಂತರಿಗಳು ಹಬ್ಬದ ಮಾರನೆಯ ದಿನಕ್ಕೆ ಬರುವುದಕ್ಕೂ ಒಂದು ಕಾರಣ ಇದೆ!

ಸಾಮಾನ್ಯವಾಗಿ ಈ ಊರ ಹಬ್ಬಗಳ ಸಮಯದಲ್ಲಿ ಜಾತಿಯ ವಿಚಾರಕ್ಕೆ, ದೇವಾಲಯದ ಪ್ರವೇಶದ ವಿಚಾರಕ್ಕೆ ಜಗಳ ಮನಸ್ತಾಪಗಳಾಗುತ್ತವೆ!
(ಕೆಲವನ್ನೂ ಈ ಮತಾಂತರಿಗಳು, ಪೂರ್ವ ನಿಯೋಜಿತವಾಗಿಯೇ plan ಮಾಡಿರುತ್ತಾರೆ!)
ಈ ಮನಸ್ತಾಪದ ಬೆನ್ನಲ್ಲೇ ದಲಿತರನ್ನು ಮತಾಂತರಕ್ಕೆ catch ಹಾಕಬಹುದು ಎಂಬ ಯೋಚನೆ ಇವರದು!
ಊರು ಹತ್ತಿಕೊಂಡು ಉರಿಯುವಾಗ ಅನ್ನ ಬೇಯಿಸ್ಕಂಡ್ರು ಅನ್ನೊ ಬುದ್ಧಿ ಅವರದು!

ಇತ್ತೀಚೆಗೆ ನಡೆದ ಸಿರಗನಹಳ್ಳಿ ದಲಿತರ ಪ್ರಕರಣದ ಉದಾಹರಣೆಗೆ ತಗೊಳ್ಳಿ! ಅಲ್ಲಿ ದೇವಾಲಯದ ವಿಷಯದಲ್ಲಿ ಮತ್ತು ದೇವಾಲಯ ಪ್ರವೇಶದ ವಿಷಯವಾಗಿ ಯಾವುದೇ ಸಮಸ್ಯೆಗಳು ಇರುವುದಿಲ್ಲ! ಇಬ್ಬರು ಭಿನ್ನಜಾತಿಯ ಜನರ ನಡುವೆ ವೈಯುಕ್ತಿಕ ವಿಚಾರಕ್ಕೆ ಜಗಳವಾದಾಗ, ಅದೇ ಜಿದ್ದನ್ನು so called ಪ್ರಬಲ ಸಮುದಾಯದವನು ಮನೆಹಾಳನಂತೆ ದೇವಾಲಯ ಪ್ರವೇಶದ ವಿಚಾರವಾಗಿ ಮನಸ್ತಾಪ ಉಂಟು ಮಾಡುತ್ತಾನೆ!
ವೈಯಕ್ತಿಕ ವಿಚಾರ ಸಾಮಾಜಿಕ ಸಮಸ್ಯೆಯಾಗಿ ತಿರುವು ಪಡೆಯತ್ತೆ!
ನಂತರ ಎಲ್ಲಾ ಮುಗಿದು ದಲಿತರಿಗೆ ದೇವಾಲಯ ಪ್ರವೇಶವಾದ ಮೇಲೆ ಏನಾಯ್ತು ಎಂದು ತಿಳಿದೇ ಇದೆ!
ಅಲ್ಲಿಯ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಮುಂದಾದ ಬೌದ್ಧ ಮತಾಂತರಿಗಳು ಕೂಡಲೆ ಅಲ್ಲಿನ ದಲಿತರೆಲ್ಲರನ್ನು ಸಾಮೂಹಿಕ ಬೌದ್ಧ ಮತಾಂತರ ಮಾಡಿಸುತ್ತಾರೆ! (Realityಲಿ ಆ ಸಾಮಾನ್ಯ ಜನರೆಲ್ಲ ಹಿಂದೂಗಳಾಗೆ ಉಳಿದಿದ್ದಾರೆ)
ಹೀಗೆ ಒಂದು ರೀತಿಯಲ್ಲಿ ಹಿಂದೂ ಧರ್ಮಕ್ಕೆ ವರ್ಣೀಯ ಹಿಂದೂಗಳೆ ಮೇಲಸ್ಥರದ ಹಿಂದೂಗಳೆ!
ಇವರ ಮನಸ್ಥಿತಿ ಬದಲಾಗದೆ ಹಿಂದುತ್ವ ಹಿಂದೂ ಧರ್ಮ ಉಳಿಯದು!
ದಲಿತರೊಂದಿಗೆ ಬೆರೆಯಬೇಕು ಅದಲಿತ ಹಿಂದೂಗಳು!

ಮತಾಂತರ ಪೂರ್ವದಲ್ಲಿ meeting ಮಾಡುತ್ತ ಹಿಂದೂ ಧರ್ಮದ ಬಗ್ಗೆ ತುಚ್ಛವಾಗಿ ಮಾತಾಡಿ, ಇಲ್ಲಸಲ್ಲದ್ದನ್ನೆಲ್ಲಾ ಬೊಗಳುವ ಮತಾಂತರಿಗಳಿಗೆ ಅಲ್ಲಿ ಯಾರೂ ಸಹ ನಮ್ಮನ್ನು ಪ್ರಶ್ನಿಸುವವರಿಲ್ಲ, ಹಳ್ಳಿ ಜನರು ಮುಗ್ಧ ಜನರು, ಎಂಬ ಬಂಡ ಧೈರ್ಯದಲ್ಲಿ ಇರುತ್ತಾರೆ!
ಸಮಾಜಗಳು ಒಂದಾದಾಗ ಇಂಥ ಪೊಳ್ಳು ಭಾಷಣಗಳ, ಸುಳ್ಳುಗಳ ವಿರುದ್ಧ ಸಿಡಿದೇಳಬಹುದು!
ವಾರ್ಣೀಯ ಅವರ್ಣೀಯ ಹಿಂದೂಗಳು ಒಗ್ಗೂಡಿದರಷ್ಟೇ ಹಿಂದೂ ಸಮಾಜ ಧರ್ಮ ಉಳಿಯುವುದು! ಏಕೆಂದರೆ ಹಿಂದೂಗಳೆಂದು ಗುರುತಿಸಿಕೊಳ್ಳುವವರಲ್ಲಿ ವರ್ಣೀಯರಿಗಿಂತ ಅವರ್ಣೀಯರೆ ಹೆಚ್ಚು!
ಮೊದಲು ಈ ವರ್ಣೀಯ ಅವರ್ಣೀಯ ಎಂಬ ಬೇದ ಅಳಿಸಿ ಹೋಗಬೇಕು! ಆಗಲೇ ಹಿಂದೂಗಳು ಉಳಿಯುವುದು!

ಹೊಲಯ ಮಾದಿಗರು ಕೀಳಾಗಿದ್ದು ಸರಿಯೇ? ಹೇಗೆ?

ಸದ್ಯಕ್ಕೆ, ಇವತ್ತಿಗೆ ಕನ್ನಡದ ಮೊದಲ ರಾಜಮನೆತನ ಎನಿಸಿಕೊಳ್ಳುವ ಚುಟು-ಕದಂಬರ ಕಾಲಕ್ಕೆ Native Kannada (Dravidian) Brahmans ರ ಉದಯವಾಗುತ್ತದೆ!
ಪ್ರಾರಂಭದಲ್ಲಿ ಪರಯ್ಯ, ಪುಲಯ, ನಾಗ, ಮಾಚಿ, ಮಲ್ಲ, ಇತ್ಯಾದಿ ಸ್ಥಳಿಯ ಮೂಲದ ಜನಾಂಗಗಳನ್ನು ಕಂಚೀ ಮತ್ತು ಇತರೆ ಬ್ರಾಹ್ಮಣ್ಯ ಶಿಕ್ಷಣ ಕೇಂದ್ರಗಳಿಗೆ ಕಳುಹಿಸಿ ಆಗಮ ಶಾಸ್ತ್ರಗಳ ಪರಿಣಿತಿಯೊಂದಿಗೆ ಅವರನ್ನು ಬ್ರಾಹ್ಮಣರನ್ನಾಗಿಸುತ್ತಾರೆ.
(ಮಯೂರ ವರ್ಮನನ್ನು ಉದಾಹರಿಸಬಹುದು)
ಆದರೆ ನಂತರದಲ್ಲಿ, ಉತ್ತರ ಭಾರತದಿಂದಲೇ, ಬ್ರಾಹ್ಮಣರನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತದೆ! (ವಲಸೆ).
ದ್ರಾವಿಡ ಬ್ರಾಹ್ಮಣರಲ್ಲದವರು.

ಇದು ಕದಂಬರ ಕಾಲದಲ್ಲಿ ತೀವ್ರಗತಿಯನ್ನು ಸಾಗುತ್ತದೆ.
ಕದಂಬರು ಹರಿತಿ ಪುತ್ರರು. ಕಂಬ ಕುಲದವರು. ಮೂಲತಃ ಇವರು ರೈತಾಪ್ಯರೆ. ಈಗಿನ ಹೊಲಯರಲ್ಲೂ ಸಹ ಹರತಿ-ಕಂಬ ಕುಲಗಳಿವೆ.
ಪೊಲಯಾರಸರು ಎನಿಸಿಕೊಂಡ ಚೇರರೊಡನೆ, ನಿರಂತರ ಸಂಪರ್ಕ ಮತ್ತು ವಂಶೀಯ ಮತ್ತು ವೈವಾಹಿಕ ಸಂಬಂಧ ಹೊಂದಿದ ಇವರು, ಅದೇ ಚೇರರೊಡಗಿನ ಮನಸ್ತಾಪಗಳಿಂದಲೇ ಸ್ವತಂತ್ರರಾಗಿ ಸಾಮ್ರಾಜ್ಯ ಸ್ಥಾಪಿಸುತ್ತಾರೆ. ಇದು ಪೂರ್ವ ಕದಂಬರ ಹಿನ್ನೆಲೆ.
ಇದಕ್ಕೆ ಹಲವಾರು ಶಾಸನಗಳು ಸಾಕ್ಷಿಯಾಗಿ ನಿಲ್ಲುತ್ತವೆ.
ಆದರೆ ಕದಂಬರ ಕಾಲದಲ್ಲಿ ದ್ರಾವಿಡ ಕನ್ನಡ ಬ್ರಾಹ್ಮಣರ ಸೃಷ್ಟಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಕಾರಣದಿಂದ ("Generating Native Kannada Brahmans") ಕದಂಬರನ್ನು ಬ್ರಾಹ್ಮಣರು ಎಂದೇ ಅಪಾರ್ಥೈಸಲಾಗಿದೆ!

ಇದು ಕೇವಲ ಕದಂಬರೊಬ್ಬರ ಕಥೆಯಲ್ಲ!
ದಕ್ಷಿಣ ಭಾರತದ ಅತಿ ಪ್ರಾಚೀನ ಸಾಮ್ರಾಜ್ಯಗಳು ಎನಿಸಿಕೊಳ್ಳುವ ಪಾಂಡ್ಯ, ಚೇರ, ಚೋಳ, ಕೊಂಗನಾಡು, ಕರುನಾಡು, ಇತ್ಯಾದಿಗಳೆಲ್ಲವೂ ಆದಿದ್ರಾವಿಡ ಆದಿಕರ್ನಾಟಕ ಪರಂಪರೆಯವು!
ಅಲ್ಲೆಲ್ಲ ಈ ಸ್ಥಳೀಯ ಸಮುದಾಯಗಳ ಬಹುಭಾಗ ಹಸ್ತಕ್ಷೇಪವಿದೆ! ಕರ್ನಾಟಕದ ಚಾಲುಕ್ಯರು ಹೊಯ್ಸಳರು ಸಹ ಇದರಿಂದೇನು ಹೊರತಲ್ಲ!

ಕಲಬ್ರರು ಕಲಚೂರಿಗಳಲ್ಲಿ, ಉತ್ತರದ (ಮದ್ಯ) ಬಾರ(ಬಹರ್/ಮಹಾರ್), ಎಂದರೆ ಉತ್ತರ ಮತ್ತು ಮದ್ಯ ಭಾರತದ ಸ್ಥಳೀಯ ಸಮುದಾಯಗಳ, ಹೊಲಯರಿಗೆ ಸಮನಾದ ಆ ಸಮುದಾಯದ ಹಸ್ತಕ್ಷೇಪಗಳಿವೆ. ಈ ಕಲಬ್ರರು ಅಪ್ಪಟ ಬ್ರಾಹ್ಮಣ ವಿರೋಧಿಗಳು!
ದಕ್ಷಿಣ ಭಾರತದ ಮೇಲೆ, ೭-೮ನೇ ಶತಮಾನದಲ್ಲಿ ಇವರಿಂದಾದ ಬದಲಾವಣೆಗಳು ಮತ್ತು ರಾಜಕೀಯ ಮೇಲಾಟಗಳು ಅಷ್ಟಿಷ್ಟಲ್ಲ!
ಶಾಕ್ತ-ಶೈವ-ವೈಷ್ಣವ-ಹಿಂದೂ (ಅವೈದಿಕ), ಜೈನ ಮತ್ತು ಬೌದ್ಧ ಧರ್ಮಗಳ ಪೋಷಕರಾದ ಇವರು, ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ಬ್ರಾಹ್ಮಣರಿಗೆ ಇದ್ದ ಭೂದಯಾ ಭೂದಾನ ಹಕ್ಕುಗಳನ್ನೆಲ್ಲ ರದ್ದು ಮಾಡಿದರು!

ಇಂಥಹ ಅತ್ಯದ್ಭುತ ಹಿನ್ನೆಲೆ ಇತಿಹಾಸ ಇರುವ ಆದಿದ್ರಾವಿಡ ಆದಿಕರ್ನಾಟಕ ನಾಮಾಂಕಿತ ಹೊಲೆಯ ಮಾದಿಗರು ಮತ್ತು ಆ ಹೆಸರುಗಳು ಹಾಳಾದದ್ದು ಹೇಗೆ?????
ಹಾಳುಗೆಡವಿದ್ದು ಯಾರು?????

೬ನೇ ಶತಮಾನದ ಕನ್ನಡ ಜೈನ ಸಾಹಿತ್ಯದಲ್ಲಿ, ಓರ್ವ ಜೈನಧರ್ಮ ಪ್ರಚಾರಕ್ಕೆ, ಚಾಲುಕ್ಯ ಅರಸರೊಂದಿಗೆ ಜೈನಮತ ಪ್ರಚಾರ ಮತ್ತು ಅದನ್ನು ಸ್ವೀಕರಿಸಿ ಎಂದು ಹೇಳುವ ಸಲುವಾಗಿ ನಡೆದ ಒಂದು ಚರ್ಚೆಯ ತುಣುಕನ್ನು ದಾಖಲಿಸಲಾಗಿದೆ.
ಅದರಲ್ಲಿ, ಆ ಮತ ಪ್ರಚಾರಕ "ನೀವು ಹೊಲಯರಾಗಿ ಹುಟ್ಟಿದ್ದೀರಿ. ಅರಸರಾಗಿ ಕ್ರೋಧಗಳ ಸಹವಾಸದಿಂದ ಕಲುಷಿತಗೊಂಡಿದ್ದೀರಿ. ನಿಮ್ಮ ಈ ಜನ್ಮ ಅಪವಿತ್ರತೆಯಿಂದ ಹೊರಬರಲು ನೀವು ಜಿನ(ಜೈನ)ರಾಗಬೇಕು. ಇಂದ್ರೀಯಗಳನ್ನು ಗೆಲ್ಲಬೇಕು" ಎಂಬ ಉಲ್ಲೇಖವಾಗುತ್ತದೆ!



ಇದೇ ಪರಿಸ್ಥಿತಿ ೧೬-೧೭ನೆ ಶತಮಾನದ ಹೊತ್ತಿಗೆ ಜಾತಿ/ಕುಲ/ಪಂಥಗಳಿಗಿದ್ದ ಪ್ರಾಮುಖ್ಯತೆ ತಗ್ಗಿ, ಹಿಂದೂ ಧರ್ಮ ಸ್ವರೂಪ ಪ್ರಾಧಾನ್ಯತೆ ಪಡೆದಾಗ, "ಹಿಂದೂ" ಎಂಬ ಪದಕ್ಕೂ ಅಂಥದ್ದೇ ಪರಿಸ್ಥಿತಿ ಒದಗಿ, ಹಿಂದೂ ಎಂಬ ಪದದ ಅರ್ಥವೇ ಕೆಡುವ ಹಂತಕ್ಕೆ ತಲುಪುತ್ತದೆ!
ಇದೆಲ್ಲವೂ, ಹಿಂದೂ ಧರ್ಮದ ಮೇಲೆ ಸವಾರಿ ಮಾಡಲು ಯತ್ನಿಸಿ, ತಮ್ಮ ಮತ ಸ್ಥಾಪನೆಗೆ ಪ್ರಯತ್ನ ಪಟ್ಟ ಬೇರೆ ಬೇರೆ ಮತ ಪ್ರಚಾರಕರ ಕೊಡುಗೆಯಾಗಿದೆ!
ಇದನ್ನು ಓದಿದ ಮೇಲೆ "ಹಾಗಾದರೆ ಮನುಸ್ಮೃತಿ ಏನು" ಎಂಬ ಪ್ರಶ್ನೆ ಮೂಡುವುದು ಸಹಜ!
ಒಂದು ರೀತಿಯಲ್ಲಿ ಇದನ್ನು ಸ್ಪಷ್ಟಪಡಿಸದೆ ಮುಂದೆ ಹೋಗಲು ಸಾಧ್ಯವಿಲ್ಲ! ಆದರಿಂದ ಮುಖ್ಯ ವಿಚಾರಕ್ಕೂ ಬರುವ ಮುನ್ನ, ಈ ಮನುಸ್ಮೃತಿಯ ಗೊಂದಲಗಳಿಗೆ full stop ಇಡುವ!

"ಮನುಸ್ಮೃತಿ"! 

ಒಂದು ವಿವಾದಿತ ಕೃತಿ! ಆದರೆ ಇದರ ಬಗೆಗಿನ ಕೆಲವು ಆಶ್ಚರ್ಯಕರ ವಿಷಯಗಳು ಹಲವರಿಗೆ ತಿಳಿದಿಲ್ಲ!
ಮನುಸ್ಮೃತಿ ರಚಿಸಿದ ಎನ್ನಲಾದ "ಮನು"ವೇ ಸ್ವತಃ ಓರ್ವ ಪಾಂಡ್ಯಕುಲ ಯುವ ರಾಜ!
ಅಂಬೇಡ್ಕರರ ವಿಚಾರವನ್ನೇ ಹೇಳುವುದಾದರೆ, ಮನು ಯಾವ ಜಾತಿಯನ್ನು ಜಾತಿ ಪದ್ಧತಿಯನ್ನು, ವರ್ಣಪದ್ಧತಿಯನ್ನು ಹುಟ್ಟುಹಾಕಲಿಲ್ಲ! ಬದಲಿಗೆ ಅದಾಗಲೇ ಇದ್ದ ವ್ಯವಸ್ಥೆಯನ್ನು ದಾಖಲಿಸಿದ.
ಜಾತಿ ಪದ್ಧತಿಯು ಮನುವಿಗಿಂತ ಹಳೆಯದು.
ಮನುಸ್ಮೃತಿಯ ರಚನೆಯ ಕಾಲ ವೈಜ್ಞಾನಿಕವಾಗಿ ಅಸ್ಪಷ್ಟ! ಆಡುಮಾತಿನಲ್ಲೇ ಹೇಳುವುದಾದರೆ, ಸಾವಿರಾರು ವರ್ಷಗಳ ಹಿಂದೆ!
ಆದರೆ ಅಂಬೇಡ್ಕರ್ ವಿಚಾರಳ ಆಧಾರದಲ್ಲೇ ಇತಿಹಾಸದಲ್ಲಿ ಇದರ ಉಲ್ಲೇಖ ಸಿಗುವುದು ಶುಂಗ ರಾಜಮನೆತನದ ಕಾಲದಲ್ಲಿ!
ಆದರೆ ಅಲ್ಲಿಯೂ ಸಹ ಅವರು ಅದನ್ನು ತಿದ್ದಿಸಲಾಯಿತು(?) ಎನ್ನುತ್ತಾರೆ! ಹಾಗದರೆ ಅಲ್ಲಿಯೂ ನಮಗೆ ಮನುಸ್ಮೃತಿಯ ರಚನೆಯ ಕಾಲ ಸ್ಪಷ್ಟವಾಗಿ ತಿಳಿಯಲಾಗದು!

ಆದರೆ ಇಲ್ಲೆಲ್ಲರೂ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿಯಬೇಕಿದೆ!
ಜಾತಿ ಅಥವ ಕುಲ ಪದ್ಧತಿಗಳು ವರ್ಣ ಪದ್ಧತಿಗೂ ಅತಿ ಪುರಾತನವಾದುದು! ಹಾಗು ಅದು ಪ್ರಕೃತಿಯ ಸಹಜ ಗುಣ!
(ಆದರೆ ಮೇಲು ಕೀಳು ಎಂಬ ತಾರತಮ್ಯವಲ್ಲ)
ಪ್ರಯತ್ನ ಪಟ್ಟರೆ ಮೇಲು ಕೀಳು ಎಂಬ ಮನೋಭಾವಗಳು ನಾಶವಾಗಬಹುದೇ ಹೊರತು, ಜಾತಿ ಕುಲಗಳಲ್ಲ! ಏಕೆಂದರೆ ಪ್ರಕೃತಿಯ ಸೃಷ್ಟಿಯನ್ನು ನಾಶ ಮಾಡಲು ಮುಂದಾಗುವುದು ಗಾಳಿಯೊಡನೆ ಗುದ್ದಾಡಿದಂತೆಯೇ ಸರಿ!
ಇನ್ನು ಕುಲ/ಜಾತಿ ಪದ್ಧತಿಗೂ ವರ್ಣ ಪದ್ಧತಿಗೂ ಬಹಳವೇ ವ್ಯತ್ಯಾಸವಿದೆ.
ಕುಲ / ಜಾತಿ ಎಂಬ ಹೆಸರೇ ಹೇಳುವಂತೆ ಅದು 'ಜಾತ' ಹುಟ್ಟಿನಿಂದಲೇ, ತಂದೆ ತಾಯಿಯಿಂದ, ಮನೆಯ ಹಿರಿಯರಿಂದ, ಪೂರ್ವಜರಿಂದ ಬರುವಂತದ್ದು.

ಆದರೆ ವರ್ಣ ಅದಕ್ಕಿಂತ ಭಿನ್ನವಾದದು.
ಗುಣ, ಆಸಕ್ತಿ ಮತ್ತು ಅರ್ಹತೆಯ ಮೇಲೆ ನಿರ್ಧಾರವಾಗುವಂತದ್ದು.
In simple words, ಈಗಿನ labour divisionಗೆ ಹೋಲಿಸಬಹುದು! A & B -Grade Officials, C Grade Helpers, D Grade Labours & E Grade Workers ಎನ್ನುವ ಹಾಗೆ!
ಅಂಬೇಡ್ಕರರ ದೃಷ್ಟಿಯಲ್ಲಿಯೇ ವರ್ಣ ಪದ್ಧತಿಯನ್ನು ವಿಶ್ಲೇಷಿಸುವುದಾದರೆ, ಆರಂಭದಲ್ಲಿ ಇದ್ದದ್ದು ತ್ರಿಗುಣ ವರ್ಣ ಪದ್ಧತಿ.
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು.
ಬ್ರಾಹ್ಮಣರ ಅತಿಯಾದ ಪೌರೋಹಿತ್ಯ ಮತ್ತು ರಾಜಾಡಳಿತದ ಮೇಲಿನ ಹಿಡಿತವನ್ನು ಒಪ್ಪದ ಸೂರ್ಯವಂಶಿ ಕ್ಷತ್ರಿಯರು, ಬ್ರಾಹ್ಮಣರನ್ನು ತಮ್ಮಿಂದ ದೂರವಿಡುವುದಕ್ಕೆ ಶುರು ಮಾಡುತ್ತಾರೆ. ಸರಿಯಾದ ಪ್ರಾತಿನಿಧ್ಯ ನೀಡಲು ಹಿಂದೇಟಾಕುತ್ತಾರೆ.
ಇದರಿಂದ ರೊಚ್ಚಿಗೆದ್ದ ಬ್ರಾಹ್ಮಣರು, ಆ ಕ್ಷತ್ರಿಯರಿಗೆ ಉಪನಯನ ಮಾಡುವುದನ್ನೇ ಬಹಿಷ್ಕರಿಸುತ್ತಾರೆ.
ಇದೇ ಕಾರಣದಿಂದ ಶೂದ್ರ ಎಂಬ ಹೊಸ ವರ್ಣ, ನಾಲ್ಕನೆ ವರ್ಣ ಉದಯಿಸುತ್ತದೆ.
ಹೀಗೇಳುತ್ತಾರೆ ಅಂಬೇಡ್ಕರ್!

ಇನ್ನು ದಕ್ಷಿಣ ಭಾರತದ ಪ್ರಸಂಗದಲ್ಲಿ ಕೊಂಚ ಭಿನ್ನತೆಯಿದೆ!
ಮೇಲಿನದ್ದಯ ಆರ್ಯವರ್ತ (ಸಿಂಧೂ - ವಿಂಧ್ಯ ಪರ್ವತಗಳ ನಡುವಣ ಪ್ರದೇಶ) ಪೌರಾಣಿಕ ಪ್ರಸಂಗ!
ದಕ್ಷಿಣ ಭಾರತದಲ್ಲಿರುವುದು ಮತ್ತು ಇದ್ದದ್ದು ಎರಡೇ ವರ್ಣ! ಅದುವೇ ಬ್ರಾಹ್ಮಣ ಮತ್ತು ಶೂದ್ರ!
ಇದು ಐತಿಹಾಸಿಕ ಪ್ರಸಂಗ!

ಮೊದಲೇ ತಿಳಿಸಿದಂತೆ ವರ್ಣಕ್ಕು ಜಾತಿಗೂ ಯಾವುದೇ ಸಂಬಂಧವಿಲ್ಲ!
(ವಾಸ್ತವದಲ್ಲಿ ಬ್ರಾಹ್ಮಣ ಎಂಬ ವರ್ಣವೇ ಜಾತಿಯಾಗಿ ಬದಲಾಗಿದೆ, ಅದು ಬೇರೆ ವಿಷಯ)
ಪುಲಯ ಕುಲ/ಜಾತಿಯಲ್ಲಿ ಹುಟ್ಟಿದ ಪುಲಸ್ತ್ಯ, ಬ್ರಾಹ್ಮಣ ವರ್ಣದಲ್ಲಿ ಗುರುತಿಸಿಕೊಳ್ಳುತ್ತಾನೆ.
ಭಾಹ್ರ ಕುಲ/ಜಾತಿಯಲ್ಲಿ ಹುಟ್ಟಿದ ದಶರಥ ಕ್ಷತ್ರಿಯ ವರ್ಣದಲ್ಲಿ ಗುರುತಿಸಿಕೊಳ್ಳತ್ತಾನೆ.
ವಲ್ಲುವ-ಸಾಂಭವ ಕುಲ/ಜಾತಿಯಲ್ಲಿ ಹುಟ್ಟಿದ ಅಗಸ್ತ್ಯರು ಸಹ ಬ್ರಾಹ್ಮಣ ವರ್ಣದಲ್ಲಿ ಗುರುತಿಸಿಕೊಳ್ಳುತ್ತಾರೆ.
ಮಾತಂಗ ಕುಲ/ಜಾತಿಯ ಮಾತಂಗ ಮಹರ್ಷಿಯು ಸಹ ಬ್ರಾಹ್ಮಣ ವರ್ಣ ಅಲಂಕರಿಸಿದವರು.
ಬೇಡ ಕುಲ/ಜಾತಿಯಲ್ಲಿ ಹುಟ್ಟಿದ ವಾಲ್ಮೀಕಿ ಬ್ರಾಹ್ಮಣ ವರ್ಣ ಅಲಂಕರಿಸಿದ್ದಾರೆ!
ಹೀಗೆ ಹಲವಾರು ಉದಾಹರಣೆ ಕೊಡಬಹುದು!
ದುರಂತದ ಸಂಗತಿ ಎಂದರೆ ಮೇಲೆ ಉಲ್ಲೇಖಿಸಿರುವ ಜಾತಿ/ಕುಲಗಳು ಎಲ್ಲವು ಇಂದು ಅಸ್ಪೃಶ್ಯ ಜಾತಿಗಳಾಗಿವೆ! ಅದು ಪಕ್ಕಕ್ಕಿರಲಿ.

ದಕ್ಷಿಣ ಭಾರತದ ಸಾಮ್ರಾಜ್ಯಗಳಲ್ಲಿ ಉಪನಯನ ಮಾಡಿಸಿ ಸಿಂಹಾಸನವೇರುವ ಪದ್ಧತಿ ಇದ್ದದ್ದು ತೀರಾ ವಿರಳ!
ಸ್ಥಳೀಯ (ದ್ರಾವಿಡ) ಸಂಪ್ರದಾಯ ಆಚಾರ ವಿಚಾರಗಳನ್ನು ಅನುಸರಿಸಿದ್ದೇ ಹೆಚ್ಚು.
ಉಪನಯನ ಪದ್ಧತಿ ಪ್ರಾರಂಭವಾದದು ಪ್ರಾಚೀನ ದಕ್ಷಿಣ ಭಾರತದ ಇತಿಹಾಸದ ಕಡೆಯ ಭಾಗದಲ್ಲಿ!
ಇಲ್ಲಿನ ಸಾಮ್ರಾಜ್ಯಗಳು ಉತ್ತರ ಭಾರತದೆಡೆಗೆ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿದ ಪರಿಣಾಮದಿಂದ, ಅಲ್ಲಿನ ಸ್ಥಳೀಯ ಅರಸರೊಂದಿಗೆ ವೈವಾಹಿಕ ಸಂಬಂಧಗಳು ಆರಂಭವಾಗುತ್ತವೆ.
ಇದೇ ಸಾಂಸ್ಕೃತಿಕ ಕೂಡುಕೊಳ್ಳುವಿಕೆಯ ಮೊದಲ ಹಂತ!
ಹೀಗೆ ಆರಂಭಗೊಂಡ ಸಂಸ್ಕೃತಿ ವಿನಿಮಯವು ದಕ್ಷಿಣದಲ್ಲೂ ಚತುರ್ವೇದಗಳ ಅಧ್ಯಯನ ಶಿಕ್ಷಣ ಕೇಂದ್ರಗಳು ಆರಂಭವಾಗುತ್ತದೆ.
ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಇತರೇ ಸ್ಥಳೀಯ ಆದಿಮ ಜನಾಂಗಗಳಿಗೆ ಅಲ್ಲಿ ಅವಕಾಶ ಕಲ್ಪಿಸಿ ಅವರನ್ನು ಬ್ರಾಹ್ಮಣರನ್ನಾಗಿ
ಸಲಾಗುತ್ತದೆ. ಅವರೇ Native Dravidian Brahmins of South India.

ನಂತರ ಇಲ್ಲಿಯೂ ಸಹ ಉಪನಯನ ಆರಂಭವಾಗುತ್ತದೆ.
ಆದರೆ ಇವೆಲ್ಲವುದರ ನಡುವೆ, ಕದಂಬರ ಮಯೂರ ವರ್ಮ ಉತ್ತರ ಭಾರತದಿಂದ ಬ್ರಾಹ್ಮಣರನ್ನು ವಲಸೆಗೆ ಆಹ್ವಾನಿಸುತ್ತಾನೆ. ಇದಕ್ಕೆ ಕಾರಣ ಅಸ್ಪಷ್ಟ! ಆತನೂ ಸಹ ಆದಿ ಕರ್ನಾಟಕ ಪರಂಪರೆಯ ಹರಿತಿ-ಕಂಬ ಕುಲದವನು.
ಹೀಗೆ ಚಾತುರ್ವರ್ಣ್ಯದ ಇತಿಹಾಸ ಭಾರತದ ಎಲ್ಲಾ ಭಾಗದಲ್ಲು ಒಂದೆ ರೀತಿಯಲ್ಲಿಲ್ಲ. ಇತಿಹಾಸವೇ ತಿಳಿಸುವಂತೆ, ನಾವು ಮನುಸ್ಮೃತಿ ಎಂದುಕೊಂಡಿರುವ ಸ್ಮೃತಿ ಮನುಸ್ಮೃತಿಯೇ ಅಲ್ಲ! ಅದು ಬಹಳ ಸಲ ತಿದ್ದುಪಡಿಗೊಂಡು ತನ್ನ ಮೂಲ ರೂಪವನ್ನೆ ಕಳೆದುಕೊಂಡಿದೆ. ಶುಂಗರ ಕಾಲದಲ್ಲಿ ಅದು ಬಹಳಷ್ಟು ಬದಲಾವಣೆ ಹೊಂದಿ ಆ ಸಾಮ್ರಾಜ್ಯದ ಕಾನೂನು ಆಗಿತ್ತು.
ಬೇರೆ ಬೇರೆ ಸಾಮ್ರಾಜ್ಯಗಳಿಗೆ ಬೇರೆಯದೇ ಕಾನೂನುಗಳಿದ್ದವು.
ದಕ್ಷಿಣ ಭಾರತದಲ್ಲಿ ಅದು ಪಸರಿಸಿದ್ದು ವಿಜಯನಗರ ಸಾಮ್ರಾಜ್ಯ ಕಾಲದ ಅಂತಿಮ ಕಾಲದಲ್ಲಿ! (ಆಕ್ರಮಣಕಾರಿ ಸುಲ್ತಾನರು ಖಿಲ್ಜಿಗಳು ಶುಂಗರ ಕಾನೂನೆ ಭಾರತ ಸಾಮ್ರಾಜ್ಯಗಳ ಕಾನನು ಎಂದು ಅಪಾರ್ಥ ಮಾಡಿಕೊಳ್ಳುತ್ತಾರೆ)
ಚಾತುರ್ವರ್ಣ್ಯದ ನಂತರ ಪಂಚಮ ವರ್ಣವೊಂದು ಉದಯಿಸುತ್ತದೆ. ನೆನಪಿರಲಿ ಇದು ಜಾತಿಯಲ್ಲ! ಕುಲವಲ್ಲ! ವರ್ಣ!
ಮೊದಲೇ ತಿಳಿಸಿದಂತೆ ಯಾವುದೇ ಕುಲ ಜಾತಿಯಲ್ಲಿ ಹುಟ್ಟಿದವರು, ತಮ್ಮ ಗುಣ, ಆಸಕ್ತಿ ಮತ್ತು ಅರ್ಹತೆಗಳ ಅನುಗುಣವಾಗಿ ಯಾವುದೇ ವರ್ಣದಲ್ಲಿ ಬೇಕಾದರು ಗುರುತಿಸಿಕೊಳ್ಳಬಹುದು!
ಕೇವಲ ಹೊಲಮಾದಿಗ ಬೇಡ ಕುಲಗಳನ್ನು ಪಂಚಮ/ಚಾಂಡಾಲ ವರ್ಣಕ್ಕೆ ಅಂಟಿಸುವುದು ಪಿತೂರಿಯೇ ಸರಿ!
ಮನುಕುಲಕ್ಕೆ ಆರಂಭ ಬರೆದ ಹೊಲಯ ಮಾದಿಗ ಕುಲಗಳೆ, ಎಲ್ಲಾ ಜಾತಿ ಕುಲಗಳಿಗು ಮೂಲ. ಇದು ಕೇವಲ ಮಾತಲ್ಲ!
ವೈಜ್ಞಾನಿಕ ಸತ್ಯ!
ಮಣ್ಣು ಮತ್ತು ಕೃಷಿಯಾಧಾರಿತ ಜಾತಿ ಕುಲಗಳಿಗೆಲ್ಲ ಹೊಲಯರು, ಕೃಷಿಯೇತರ ಪಶುಸಂಗೋಪಾನೆ ಜಾತಿ ಕುಲಗಳಿಗೆಲ್ಲ ಮಾದಿಗರೆ ಮೂಲರಾಗಿದ್ದಾರೆ.
ಹಾಗೆಯೇ ಈ ಎರಡು ಆದಿಮ ಜನಾಂಗಗಳು ಒಂದೇ ಮೂಲವನ್ನು ಪರಸ್ಪರ ಹಂಚಿಕೊಂಡಿವೆ.
ಮುಂದಿನ ಭಾಗದಲ್ಲಿ ಖಂಡಿತವಾಗಿ, ಹೊಲೆಮಾದಿಗ ಪದದ ಅರ್ಥಗಳು ಹಾಳಾದುದರ ಬಗ್ಗೆ, ಹೊಲೆಮಾದಿಗ ಹೆಸರುಗಳು ಕೀಳು ಸೂಚಕ ಪದವಾದುದರ ಸಂಚು ವಂಚನೆಗಳ ಬಗ್ಗೆ ಬರೆಯಲಿದ್ದೇನ್ನೆ.
ಈಗ ನೇರವಾಗಿ ವಿಷಯಕ್ಕೆ ಬರುವ!

ಇಂಥಹ ಅದ್ಭುತ ಇತಿಹಾಸವಿರುವ, ಮಹಾನ್ ಪೌರಾಣಿಕ - ಐತಿಹಾಸಿಕ ವ್ಯಕ್ತಿತ್ವಗಳು ಇರುವ, ಸಾವಿರಾರು ವರ್ಷಗಳ ಭವ್ಯ ಪರಂಪರೆ ಇರುವ ಹೊಲಯರು, ಅವರ ಹೆಸರು, ಅದರ ಅರ್ಥ ಅದೇಗೆ ಕೀಳಾಯಿತು? ಎಂಬ ಗೊಂದಲ ಮೂಡುವುದು ಸಹಜ!

ವಿಜಯನಗರ ಸಾಮ್ರಾಜ್ಯ ಪಥನವಾಗಲು ಕಾರಣವಾದ ಪ್ರಮುಖ ಅಂಶಗಳೇ ಹೊಲಯ ಮಾದಿಗರ ಹಿರಿಮೆ ಗರಿಮೆಗಳ ಮಣ್ಣು ಮಾಡಿವೆ!
ಪಾಳು ಬಿದ್ದ ಹಂಪೆ, ಹಾಳಾದ ಹೊಲಯ ಮಾದಿಗರ ಬಿಂಬವಾಗಿದೆ!
೧.) ಶೈವ ವೈಷ್ಣವ ಬ್ರಾಹ್ಮಣರ ಕಿತ್ತಾಟ
೨.) ಮಹಮದ್ದೀಯರ ಒಳನುಸುಳುವಿಕೆ ಮತ್ತು ಆಕ್ರಮಣ
೩.) ವಿಜಯನಗರ ಸಾಮ್ರಾಜ್ಯದಲ್ಲಿ ವೃತ್ತಿಗೆ ಅನುಗುಣವಾಗಿ ಕಲ್ಪಿಸಿಕೊಟ್ಟ ಪ್ರಾಮುಖ್ಯತೆಗಳ ಪಲವಾಗಿ ಹಲವಾರು ನವ ಜಾತಿಗಳು ಉದಯಿಸಿದವು, ಮತ್ತು ಜಾತಿ ಜಾತಿಗಳ ನಡುವಿನ ಕಿತ್ತಾಟಗಳು ಹೆಚ್ಚಾದವು.
೪.) ಪಾಳೆಗಾರ ಬಂಡಾಯ. ವಿಜಯನಗರ ಸಾಮ್ರಾಜ್ಯದಿಂದ ಸ್ವತಂತ್ರರಾಗಲು ಕಾಯುತ್ತಿದ್ದ ಪಾಳೆಗಾರರು, ಸಾಮ್ರಾಜ್ಯ ಪಥನಕ್ಕೆ ಪರೋಕ್ಷವಾಗಿಯೇ ಕಾರಣರಾದರು!

ಇದೇ ಅಂಶಗಳು ಹೊಲಯ ಮಾದಿಗರ ಇತಿಹಾಸವನ್ನೂ ನೆಲಸಮ ಮಾಡಿವೆ! ತದನಂತರ, ಬಹುಸಂಖ್ಯಾತ ಸಮಾಜವನ್ನು ಮತಸ್ಥಾಪಕರು ಸೆಳೆಯುವ ನಿಟ್ಟಿನಲ್ಲಾದಂತಹ ಲೋಪಗಳು ಮತ್ತು ಇತರೇ ಸಾಹಿತ್ಯಿಕ ಲೋಪಗಳು ಇದರಲ್ಲಿ ಕಾಣಬಹುದು!

"ಹೊಲಸು ತಿಂಬವನೆ ಹೊಲಯ" ಎಂಬ ಮಾತನ್ನು ಕೇವಲ ಸಾಹಿತ್ಯಿಕ ರೂಪದಲ್ಲಿ ನೋಡುವುದಾದರೆ, ಅಲ್ಲಿ ಹೊಲಸು ಎಂಬ ಪದದ ಅರ್ಥವೇ ಬದಲಾಗುವ ಸಂಭವವಿದೆ!
"ಹೊಲಸು" ಎಂಬುದಕ್ಕೆ "ಫಲ/ಪಲ" ಎಂಬ ಅರ್ಥವಿದೆ. 
(ಹೊಲದಲ್ಲಿ ಬಿತ್ತಿದರ ಪಲ ಹೊಲಸು- ಹೊಲದಲ್ಲಿ ಬೆಳೆದದ್ದೆಲ್ಲಾ ಹೊಲಸು ಎಂಬಂತೆ) ಇದೇ ಪದದ ರೂಪವಾದ "ಹುಲುಸು" ಎಂಬ ಪದಕ್ಕೆ "ಸಮೃದ್ಧವಾದ" ಎಂಬ ಅರ್ಥವಿದೆ. 
ಸಂಸ್ಕೃತದಲ್ಲಿ 'ಪುಲ್' ಎಂದರೆ 'ಮಹಾ'/'ಮಹಾನ್' ಎಂದರ್ಥ!
So, ಇಲ್ಲಿಗೆ 'ಹೊಲಸು' ಎಂಬ ಪದದ ಅರ್ಥ ರೂಪವು ಫಲ ಎಂದು ಅರ್ಥೈಸುತ್ತದೆ. ಇದರ ಇನ್ನೊಂದು ಅಯಾಮದ ವಿಚಾರ ಹೀಗೆದೆ. ಬೆವರನ್ನು 'ಹೊಲಸು' (ಕೊಳಕು ಎಂಬ ಅರ್ಥದಲ್ಲಿ) ಸೂಚಿಸಲಾಗುತ್ತದೆ.

ಬ್ರಾಹ್ಮಣರು ಅಥವ ದ್ವಿಜರು ಬೆವರು ಸುರಿದಬಾರದು. ಅವರ ಬೆವರು ನೆಲಕ್ಕೆ ತಾಗಬಾರದು. ಅವರು ತಮ್ಮ ಶಿರ(ಬುದ್ಧಿ) ಯನ್ನು ಮಾತ್ರ ಬಳಸಿ ದುಡಿಯಬೇಕು. ಜೀವನ ಸಾಗಿಸಬೇಕು ಎಂಬುದು ಸ್ಮೃತಿಯ ಉಕ್ತಿ ಎನ್ನಲಾಗಿದೆ.
ಮಿಕ್ಕವರು ದೇಹ ಉಪಯೋಗಿಸಿ, ಬೆವರು ಸುರಿಸಿ ದುಡಿಯಬೇಕು ಎಂಬ ಮಾತಿದೆ.

ಅಲ್ಲಿಗೆ, 'ಹೊಲಸು' ಎಂಬ ಪದ ದುಡಿದು ತಿನ್ನುವ ಅಥವ ದೇಹ ದಂಡಿಸಿ ದುಡಿದು ತಿನ್ನುವವರ 'ಪಲ' ಸೂಚಕವಾಗುತ್ತದೆ. ಶ್ರಮಿಕ ವರ್ಗದ ಜನರು 'ದುಡಿಮೆ ಮತ್ತು ಫಲ'ಕ್ಕೆ ಹೊಲಸು ಎಂಬ ಪದ ಸಮಾನಾರ್ಥಕವಾಗಿದೆ.

ಇವನ್ನು ಹೊರತುಪಡಿಸಿ, 'ಹೊಲಸು' ಎಂಬ ಪದವನ್ನು "ಮಾಂಸ" ಎಂಬರ್ಥದ ರೂಪಕ ಎಂಬುದನ್ನು ಒಪ್ಪಲಾಗದು. ಆದರೆ ಅದನ್ನು ಹಾಗೆಯೇ ಬಳಸಲಾಗಿದೆ. ಸಂಸ್ಕೃತದಲ್ಲಿ ಹೊಲಯ ಎಂಬ ಪದಕ್ಕೆ ವಲ್ಲಭ (ತಮಿಳಿನ ವಲ್ಲುವ) ಎಂಬ ಸಮಾನಾರ್ಥಕ ರೂಪಾಂತರ ಪದವಿದೆ. ಆದರೆ ವಲ್ಲುವ ಅಥವ ವಲ್ಲವ ಎಂಬ ಪದದ ಅರ್ಥ ಕೆಟ್ಟಿಲ್ಲ! ತಮಿಳು-ಮಲಯಾಳಂನಲ್ಲಿ ಪರಯ್ಯ ಮತ್ತು ಪುಲಯ ಎಂಬ ಪದ ಬಳಕೆಯಿದ್ದರೂ ಸಹ ಅವೂ ಸಹ ಕೀಳಾರ್ಥವನ್ನು ಹೊಂದಿಲ್ಲ, ಅಥವ ಅದರ ಅರ್ಥವನ್ನು ತುಚ್ಛೀಕರಿಸಿಲ್ಲ! ಆದರೆ, ಜನಾಂಗೀಯವಾಗಿ ಆ ಸಮುದಾಯದವರನ್ನು ಕೆಳವರ್ಗದವರು ಎಂದು ಸೂಚಿಸಲಾಗಿದೆ ಅಷ್ಟೆ!

ತೆಲುಗಿನಲ್ಲೂ ಸಹ ಮಾಲ, ಮಳ, ಮಲ್ಲ, ಮಲೆಯ ಎಂಬ ಪದಗಳಿದ್ದೂ, ಅಲ್ಲಿಯೂ ಯಾವುದರ ಅರ್ಥವೂ ಕೆಟ್ಟಿಲ್ಲ! ಸಾಹಿತ್ಯಿಕವಾಗಿಯೂ ಅವು ಕೆಟ್ಟ ಪದಗಳಂತೆ ಬಳಕೆಯಾಗಿಲ್ಲ!
ಆದರೆ ಕರ್ನಾಟಕದಲ್ಲಿ, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೊಲಯ ಎಂಬ ಪದವನ್ನು ಬೈಗುಳದ ಪದವಾಗಿರುವುದು ನಿಜಕ್ಕೂ ದುರಂತ!

ಇದರ ಹಿಂದೆ ಅದೆಂತಾ ಪಿತೂರಿ, ಅದೆಂತಾ ವಿದ್ವಂಸಕರು ಇದನ್ನು ಹುಟ್ಟಿಹಾಕಿರಬಹುದು ಎಂಬ ಅನುಮಾನ ಮೂಡದೆ ಇರದು!
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬೇರೆ ಪ್ರಾಂತ್ಯಗಳಲ್ಲಿ, ಭಾಷೆಗಳಲ್ಲಿ ಅರ್ಥ ಕೆಡದ 'ಹೊಲಯ' ಎಂಬುದರ ಮತ್ತು ಅದರ ಸಮಾನಾರ್ಥಕ ಪದಗಳು,
ಕರ್ಣಾಟಕದಲ್ಲಿ ಮಾತ್ರ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಮಾತ್ರ ಕೆಡಲು ಕಾರಣವೇನು?

ಮೇಲಿನ ಎರಡು ವಿವರಣೆಗಳು, ಹೊಲಯ ಎಂಬ ಪದದ ಸಾಹಿತ್ಯಕ ಆಯಾಮದಲ್ಲಿ ಉಚ್ಛಾರ್ಥವನ್ನು ಸಮರ್ಥಿಸುತ್ತದೆ.
ಈಗ ರಾಜತಾಂತ್ರಿಕ ರಾಜಕೀಯ ಆಯಾಮದ ವಿಚಾರ ನೋಡುವ.
ಭಾರತದ ಇತಿಹಾಸದ ರಾಜತಂತ್ರದಲ್ಲಿ ಮತ ಧರ್ಮಗಳು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿವೆ.

ನೆಲಮೂಲ ಧರ್ಮಗಳಾದ ಆದಿಮರ ಶಕ್ತಿ, ಶೈವ ವೈಷ್ಣವ, ಅಜೀವಿಕ, ಜೈನ ಹಾಗು ಬೌದ್ಧ ಧರ್ಮಗಳು, ಮತ್ತು ವೈದಿಕ ಆಚರಣೆಗಳು, ನವಮತಗಳಾಗಿ ಉದಯಿಸಿದ ಸಿಖ್ಖ- ಲಿಂಗಾಯತ ಮತಗಳು, ಇತ್ಯಾದಿಗಳ ಪ್ರಭಾವದಿಂದಾಗಿ ಭಾರತೀಯ ರಾಜತಂತ್ರದ ಇತಿಹಾಸವು ಬಹಳಷ್ಟು ವೈವಿಧ್ಯತೆಯನ್ನು ಹೊಂದಿವೆ.
ಒಂದು ಮತ ಸ್ಥಾಪಿಸಿ, ಅದನ್ನು ಬೆಳೆಸಿ, ಬಳಸಲು ಅಲ್ಲಿಗೆ ಜನಾಕರ್ಷಿಸುವುದು ಎಂದರೇನು ಸಾಮಾನ್ಯ ಕಾರ್ಯವಲ್ಲ!
ಮತ ಸ್ಥಾಪನೆ ಅಥವ ಪಂಥ ಸ್ಥಾಪನೆಯ ನಂತರ ಅದನ್ನು ಅನುಸರಿಸಲು ಬಹುಸಂಖ್ಯಾತ ಸಮುದಾಯವೊಂದನ್ನು ಅಲ್ಲಿಗೆ ಆಕರ್ಷಿಸಲು ನಾನಾ ಪ್ರಯತ್ನಗಳು ನಡೆಯುತ್ತವೆ.

ಕೆಲವರನ್ನು ತಮ್ಮ ಭವ್ಯ, ಸದ್ಗುಣ, ಸುಲಕ್ಷ್ಯ, ಸಂಪನ್ನತೆಯ ತತ್ವ ಸಿದ್ಧಾಂತಗಳಿಂದ ಆಕರ್ಷಿಸಿಕೊಂಡ ಮತಧರ್ಮಗಳು, ಅದಕ್ಕೆ ಆಕರ್ಷಣೆಗೆ ಒಳಗಾಗದೆ ಹಾಗೆ ಉಳಿಯುವವರನ್ನು ಅಲಕ್ಷಿಸಿ 'ನೀಚ' ಸ್ಥಾನಕ್ಕೆ ದೂಡುವುದು ಸಹಜ!
ಆದರೆ ಕೆಲವರು ಎಲ್ಲೇ ಹೋದರೂ ಸಹ ತಮ್ಮ ಮೂಲ ಮರೆಯದೆ ಆಯಾ ಮತಧರ್ಮಗಳೊಂದಿಗೆ ತಮ್ಮ ಮೂಲಕುಲಗಳ ಹೆಸರನ್ನು, ಗುರುತುಗಳನ್ನೂ ಕರೆದೊಯ್ದಿರುವುದನ್ನೂ ಕಾಣಬಹುದು! ಮಾತಂಗ ಬೌದ್ಧರು, ನಾಗ ಬೌದ್ಧ ಹೊಲಯರು, ಜೀನ-ವಲ್ಲಭರು ಇದಕ್ಕೆ ಸಾಕ್ಷಿ ಎನ್ನಬಹುದು!
ಇಂತಹ ಕಾಲದಲ್ಲೂ ಕರ್ನಾಟಕದ ಮಟ್ಟಿಗೆ 'ಹೊಲಯ' ಎಂಬ ಪದ ಹಾಳಾಗಿರಲು ಸಾಧ್ಯವಿಲ್ಲ.
ಏಕೆಂದರೆ ಹೊಲಯ ಎಂಬುದರ ಪದದ ಕೀಳಾರ್ಥದ ಉಲ್ಲೇಖವಾಗುವುದು ೧೨ನೇ ಶತಮಾನದ ಶರಣರ? ವಚನಗಳಲ್ಲಿ!

ಯಾವುದೇ ಧರ್ಮ ಮತ ಪಂಥ ಅನುಸರಿಸಿದರೂ ತಮ್ಮ ಮೂಲ ಕುಲವನ್ನು ಬಿಟ್ಟುಕೊಡದ ನೆಲಮೂಲವಾಸಿ ಹೊಲಯಮಾದರಸರಿಂದಲೇ ಭಾರತದಲ್ಲಿ ಭಾರತೀಯ ನೆಲಧರ್ಮಗಳಾದ, ಆದಿಮ, ವೈದಿಕ, ಜೈನ, ಬೌದ್ಧ, ಸಿಖ್ಖ ಲಿಂಗಾಯತ ಧರ್ಮಗಳೆಲ್ಲಾ ಪರಸ್ಪರ ಪೂರಕವಾಗಿಯೇ ಬೆಳೆದಿವೆ.
'ಕಲಬ್ರರು' ಮಧ್ಯ ಭಾರತದಿಂದ ದಕ್ಷಿಣದ ಸಾಮ್ರಾಜ್ಯಗಳ ಮೇಲೆಲ್ಲಾ ಪ್ರಭಾವ ಬೀರಿದ್ದ ಅರಸರು. ಆದರೆ ಇವರಿಗೆ ಗಟ್ಟಿನೆಲೆ ಸಿಕ್ಕಿದ್ದು ಮಾತ್ರ ಕರ್ಣಾಟಕದಲ್ಲಿ. ಎಂದರೆ ಉತ್ತರ ಕರ್ನಾಟಕದಲ್ಲಿ!
ತಮಿಳುನಾಡಿನ ಕಲ್ಲರ್ ಜನಾಂಗವನ್ನು ಕಲಬ್ರ ಮೂಲದವರು ಎನ್ನಲಾಗುತ್ತದೆ.

ಇದೇ ಕಲಬ್ರರ ಮೂಲ ಕೆದಕಿದರೆ ಪರಾಮಾರರು ಕಾಣ ಸಿಗುತ್ತಾರೆ. ಈ ಪರಾಮಾರರು ಹೊಲಯ ಮಾದಿಗರ ಕೂಡು ಜಾತಿ.
ದಕ್ಷಿಣ ಭಾರತದಲ್ಲಿ ಎಡಗೈ ಬಲಗೈ ಜಾತಿ ವಿಂಗಡನೆ ಇದ್ದಂತೆ ಉತ್ತರ ಭಾರತದಲ್ಲಿಲ್ಲ. ಅಲ್ಲಿ ಎರಡೂ ಸಹ ಒಂದೇ.
ಅದನ್ನು ಹೆಸರೇ ಸೂಚಿಸುತ್ತದೆ. ಪರಯ್ಯ+ಮಹಾರ್ = ಪರಾಮಾರ್ ಎಂದು.
ಪರಯ್ಯ ಎಂದರೆ ತಮಿಳುನಾಡಿನ ಹೊಲಯ ಜಾತಿ. ಇದರ ಅರ್ಥ ಆದಿ ಶೈವರು/ಚರ್ಮವಾದ್ಯ ನುಡಿಸುವವರು ಎಂದು. ಈ 'ಪರಯ್ಯ' ಎಂಬುದು ದಕ್ಷಿಣಕ್ಕೆ ಬಲಗೈ ಪಂಗಡದ ಸೂಚಕವಾದರೆ, ಉತ್ತರ ಭಾರತಕ್ಕೆ ಎಡಗೈ ಸೂಚಕ ಪದ. ಇದೇ ಕಾರಣಕ್ಕೆ ಪರಯ್ಯ ಎಂಬುದನ್ನು ಉತ್ತರ ಭಾರತದ ಭಾಷೆಗಳಿಗೆ, ಅಥವ ಆಂಗ್ಲಕ್ಕೆ ಭಾಷಾಂತರಿಸಿದಾಗ 'ಮಾದಿಗ' ಎಂದು ಬರೆಯಲಾಗುತ್ತದೆ. ಮಹಾರ್ ಎಂದರೆ ಮಹಾರಾಷ್ಟ್ರ ಮತ್ತು ಇತರೇ ಉತ್ತರ ಭಾರತದ ರಾಜ್ಯಗಳ ಹೊಲಯ ಎಂಬುದರ ಸೂಚಕ ಪದ. ಎಂದರೆ ಬಲಗೈ ಪಂಗಡ. ಪರಾಮಾರರು ಮಾದಿಗರಂತೆ ಪಶುಪಾಲಕರೂ ಹೌದು, ಹೊಲಯರಂತೆ ಬೇಸಾಯಗಾರರೂ ಹೌದು.

ಇದೇ ಕಾರಣಕ್ಕೆ ಈ ಎಡಗೈ ಬಲಗೈ ವಿಂಗಡಣೆಯ ಭಿನ್ನವು ಉತ್ತರ ಭಾರತದಲ್ಲಿ ಕಾಣಸಿಗದು.
ಕಲಬ್ರರು ಕರ್ನಾಟಕದಲ್ಲಿ ಕಲಚೂರಿಗಳು ಎನಿಸಿಕೊಳ್ಳುತ್ತಾರೆ. ಭಾರತದ ಇತಿಹಾಸದಲ್ಲೇ ಕಲಬ್ರರು ವಿಭಿನ್ನ ಸ್ಥಾನ ಹೊಂದಿದ್ದಾರೆ! ಕಾರಣ ಅವರ ಹೊಸ ಸಮಾನ ನೀತಿ! ಈ ಅರಸರು ಬ್ರಾಹ್ಮಣರಿಗೆ ಹಿಂದಿನ ಅರಸು ಮನೆತನಗಳು ನೀಡಿದ ಭೂದಾನ, ಭೂದಯಾ, ಗೋದಾನ ಇತ್ಯಾದಿ ಹಕ್ಕು ಅಧಿಕಾರಗಳನ್ನು ರದ್ದು ಮಾಡಿದ್ದರು! ಕರ್ನಾಟಕದಲ್ಲಿ ಹೊಲಯಾರಸರಾದ ಚಾಲುಕ್ಯರೊಡನೆ ಮತ್ತು ಚೋಳರೊಡನೆ ವೈವಾಹಿಕ ಸಂಬಂಧಗಳನ್ನು ಮಾಡಿ, ಕ್ರಮೇಣ ೧೦-೧೨ನೆ ಶತಮಾನದ ಹೊತ್ತಿಗೆ ಅದೇ ಚಾಲುಕ್ಯರ ಮೂಲನೆಲೆಯ ಮೇಲೆಯೇ ತಮ್ಮ ಕಲಚೂರಿ ಸಾಮ್ರಾಜ್ಯ ಸ್ಥಾಪಿಸುತ್ತಾರೆ!
ಆರಂಭದಲ್ಲಿ ಬ್ರಾಹ್ಮಣರನ್ನು ವಿಶೇಷ ಸ್ಥಾನದಿಂದ ಕೆಳಗಿಳಿಸಿದ ಕಾರಣ ಕಲಬ್ರರ ಮೂಲವಾದ 'ಹೊಲಯ ಮಾದಿಗ' ಕುಲಗಳನ್ನು ತುಚ್ಛೀಕರಿಸುವ ಸಾಧ್ಯತೆಗಳು ಹೆಚ್ಚಿವೆ! ಭೂದಾನ (ನೆಲ ಹಂಚುವ ಕಾರ್ಯ), ಭೂದಯಾ(ನೆಲದ ಮೇಲಿನ ಹಕ್ಕು), ಗೋದಾನ (ಪಶುಗಳ ದಾನ) ಇವೆಲ್ಲವನ್ನು ರದ್ದು ಪಡಿಸಿದ ಕಲಬ್ರರ ಮೂಲವನ್ನು ಬ್ರಾಹ್ಮಣರು ಜಾನಪದೀಯವಾದಿ (ಸಾಹಿತ್ಯಕವಾಗಿ) "ಕೊಲ್ಲುವವನೆ ಮಾದಿಗ ಹೊಲಸು ತಿಂಬವನೆ ಹೊಲಯ" ಎಂದು ಕೀಳಾರ್ಥಕ್ಕೆ ದೂಡಿದ ಮೊದಲ ಹಂತವಿದು ಎನ್ನಬಹುದು!
ಆದರೆ ಇದೇ ಕಲಚೂರಿಗಳು ಬಸವಣ್ಣನ ಕಾಲದ ಹೊತ್ತಿಗೆ ಪುರೋಹಿತಶಾಹಿಗಳ ಕೈವಶವಾಗಿದ್ದು ದುರಂತ!
ಇದು ಬಸವಣ್ಣನಿಗಿಂತಲೂ ಹಿಂದಿನ ವಿಚಾರ ಎನ್ನಬಹುದು!
ಏಕೆಂದರೆ ಬಸವಣ್ಣ ತಮ್ಮ ಪ್ರೌಢಾವಸ್ಥೆಯಲ್ಲಿ ಹೊಲಯ ಮಾದಿಗರ ಸ್ನೇಹ ಮಾಡಿದ್ದನ್ನು ಕಂಡ ಬ್ರಾಹ್ಮಣರು, ಬಸವಣ್ಣನನ್ನು ಜರಿದಿದ್ದರ ಬಗ್ಗೆ ಕಥಾ ಹಿನ್ನೆಲೆಗಳಿವೆ.

ಬಸವಣ್ಣ ಮುಂದೆ, ಹೊಲೆಮಾದಿಗರನ್ನು ಜರಿದ ಬ್ರಾಹ್ಮಣರನ್ನು ಮರುಪ್ರಶ್ನಿಸುತ್ತಾರೆ! ಯಾರು ಮಾದಿಗ? ಯಾರು ಹೊಲಯ? ಎಂದು!
ಆಗ ಬ್ರಾಹ್ಮಣನೊಬ್ಬ ಕೊಲುವವನೆ ಮಾದಿಗ ಹೊಲಸು ತಿಂಬವನೆ ಹೊಲಯ ಎನ್ನುತ್ತಾನೆ.
ಬಸವಣ್ಣ, ಇದನ್ನು ಕೇಳಿ ಹೊಲಯ ಮಾದಿಗರ ಪರವಾಗಿ ಮಾತನಾಡುವ ಬರದಲ್ಲಿ ಹೊಲಯ ಮಾದಿಗ ಪದಗಳ ಅರ್ಥವನ್ನೇ ಸಂಪೂರ್ಣವಾಗಿ ಕೊಂದು ಹಾಕುತ್ತಾರೆ!
ಬಸವಣ್ಣ ಹೀಗೆ ಪ್ರತ್ಯುತ್ತರಿಸುತ್ತಾರೆ.

"ಸಣ್ಣ ಪ್ರಾಣಿಯನ್ನು ದೊಡ್ಡ ಪ್ರಾಣಿ ತಿಂದು ಬದುಕುವುದು ಪ್ರಕೃತಿಯ ಸಹಜತೆ! ಕೊಲ್ಲುವವನು ಹೇಗೆ ಮಾದಿಗನಾಗುತ್ತಾನೆ? ಕೊಲ್ಲುವವನಲ್ಲ ಮಾದಿಗ!
ತನ್ನಂತೆ ಇರುವ ಮತ್ತೊರ್ವ ಮನುಷ್ಯನನ್ನು ಮನುಷ್ಯ ಎಂದೂ ಪರಿಗಣಿಸದೇ ಶೋಷಿಸುವನು ಮಾದಿಗ! ಹೊಲಸು (ಮಾಂಸ) ತಿಂದವನಲ್ಲ ಹೊಲಯ!
ದೇವರು ದಿಂಡಿರು ಎಂದು ಹೇಳಿ ಮೌಡ್ಯದ ವೈಪರಿತ್ಯಕ್ಕೆ ತಲುಪಿ, ಜನರಿಂದ ದುಡ್ಡು ಕೀಳುವ, ಶ್ರಮವಿಲ್ಲದೆ ಸಂಪಾದಿಸುವ ಹಣವೆ ಹೊಲಸು!
ಆ ಹೊಲಸು ತಿನ್ನುವವರೆ ಹೊಲಯ" ಎಂದರು!

ಇದನ್ನು ಸೂಕ್ಷ್ಮವಾಗಿ ಅಧ್ಯಯಿಸಿದರೆ ಈ ವಿವರಣೆಯ ಮೂಲಕ ಹೀಗಳೆದದ್ದು ಬ್ರಾಹ್ಮಣರನ್ನು ಪುರೋಹಿತರನ್ನು ಎಂದು ಸ್ಪಷ್ಟವಾಗಿ ತಿಳಿಯುತ್ತದೆ!
ಆದರೆ, ಆ ನಿಟ್ಟಿನಲ್ಲಿ ಹೊಲಯ ಮಾದಿಗರ ಹೆಸರನ್ನು ಹಾಳುಮಾಡಿದ್ದಂತು ನಿಜ!
ಹೊಲಯ ಮಾದಿಗರ ಹೆಸರನ್ನು ಹಾಳು ಮಾಡಲು ಬ್ರಾಹ್ಮಣರು ಪ್ರಾರಂಭಿಸಿದರೆ, ಅದನ್ನು ಈ so called ಜಾತಿವಿನಾಶ ಮಾಡಲು ಹುಟ್ಟಿಕೊಂಡ ಶರಣರು & ಭಕ್ತಿ ಪಂಥದ ಕೆಲವು ದಾಸರುಗಳು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ!
ಜಾತಿ ನಿಂದನೆ ಕೇಸಿನ A1 ಆ ಬ್ರಾಹ್ಮಣರ ಜೊತೆಗೆ ಬಸವಣ್ಣ & team ಅನ್ನು ಪರಿಗಣಿಸಬೇಕಾದೀತು! ಜೊತೆಗೆ ಇದನ್ನೇ ಇವರ ಮಾತನ್ನೇ ಅನುಸರಿಸಿದ ಶೂದ್ರರು & ನವ ಕ್ಷತ್ರಿಯರೂ ಅಪರಾಧಿಗಳೆ!
ಇದೇ ವಿಚಾರವಾಗಿ ಕೆಲವರ ಅಭಿಪ್ರಾಯ ಹೀಗೂ ಇದೆ!
"ಶರಣರೇನು ಸಾಚಾಗಳೆ? ಇಂದಿನ ಮಿಷನರಿಗಳೇ ಪರವಾಗಿಲ್ಲ!
ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸಿ ಜನರಿಗೆ ಮಂಕುಬೂದಿ ಎರಚಿ ಮತಾಂತರ ಮಾಡುತ್ತಾರೆ,
ಆದರೆ ಆಗಿನ ಕೆಲ ಲಿಂಗವಂತ ಶರಣರು ಒಂದು ಹೆಜ್ಜೆ ಮುಂದೆ ಹೋಗಿ, ಹೊಲಯ ಮಾದಿಗರ ಹೆಸರನ್ನೇ ಕೆಡೆಸಿ ಲಿಂಗದೀಕ್ಷೆ ಕೊಡಲು ಮುಂದಾಗಿದ್ದಾರೆ!" ಎಂದು!
ಇದಕ್ಕೆ ಪೂರಕವೆಂಬತೆ ಮತ್ತೊಂದು ಅಂಶವನ್ನು ನಾವು ಪರಿಗಣಿಸಲೇ ಬೇಕು.

ಅದುವೇ ದಕ್ಷಿಣ ಕರ್ನಾಟಕದಲ್ಲಿ ಅದಾಗಲೇ ಹೊಲಯರಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿದ್ದ ಶ್ರೀ ವೈಷ್ಣವ ಧರ್ಮದ ಅನುಸರಣೆ.
ರಾಮಾನುಜಾಚಾರ್ಯರು ಈ ಹೊಲಯರ ಹೆಸರು ಕೆಡಿಸದೆ ಅವರನ್ನು ತಿರುಕುಲ ಹೊಲಯರೆಂದು ಕರೆದು ಅವರಿಗೆ ಪ್ರಾಮುಖ್ಯತೆ ದೊರಕಿಸಿಕೊಡುತ್ತಾರೆ.
ಈ ಹೊಲಯರು ಮೊದಲಿನಿಂದಲೂ ಸಾಳುವ ರಾಯ (ಚಲುವರಾಯ), ತಿಮ್ಮಪ್ಪ (ತಿರುಪತಿಯ ವೆಂಕಟೇಶ್ವರ/ಮಲಯಪ್ಪ), ಅಯ್ಯನಗುಡಿ ಆಂಜನೇಯ (ಕೆಂಗಲ್ ಹನುಮಂತ), ಮುತ್ತಯ್ಯ (ಮುತ್ತತ್ತಿ ಹನುಮ), ಚನ್ನಯ್ಯ (ಬೇಲೂರು ಚನ್ನಕೇಶವ) ಇತ್ಯಾದಿ ಆದಿ ವೈಷ್ಣವ ದೈವಗಳನ್ನು ಆರಾಧಿಸುತ್ತಿದ್ದ "ಆದಿ ವೈಷ್ಣವ"ರೇ ಆಗಿದ್ದಾರೆ. 
ಇವರನ್ನು ಸಂಘಟಿಸಿದ್ದು ಮಾತ್ರ ರಾಮಾನುಜಾಚಾರ್ಯರೆ.
ಮದರಾಸಿಗೆ ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಅಂಬೇಡ್ಕರರು ಬುದ್ಧನ ಜೊತೆ ರಾಮಾನುಜರನ್ನು ಸಮೀಕರಿಸಿ ಮಾತನಾಡುತ್ತಾರೆ.
ಇದರಂತೆ, ಅಂಬೇಡ್ಕರ್, ಬುದ್ಧನಿಗೆ ಹಾಗು ರಾಮಾನುಜರಿಗೆ ಎಷ್ಟು ಗೌರವ ಭಾವ ಹೊಂದಿದ್ದರು ಎಂದು ತಿಳಿಯುತ್ತದೆ.
ಲಿಂಗದೀಕ್ಷೆಯ ಮೂಲಕ ಉತ್ತರ ಕರ್ನಾಟಕದ ಹೊಲಯರನ್ನು ಲಿಂಗದೀಕ್ಷೆ ಕೊಟ್ಟು ತಮ್ಮೆಡೆ ಸೆಳೆಯಲು ಇಂಥಹ ಪ್ರಯತ್ನಗಳು ನಡೆದಿವೆ ಎನ್ನಬಹುದು!

ಬಸವಣ್ಣನವರ ಮೇಲಿನ ವಿವರಣೆಯನ್ನು ಕಂಡರೆ ಎಂಥವರಿಗೂ ಒಂದು ಕ್ಷಣ ಬೆರಗಾಗುವುದಂತು ನಿಜ!
ಮಾದಿಗರೇನು ಶೋಷಣೆ ಮಾಡುತ್ತಿದ್ದಾರೆಯೆ? ಅಥವ ಶೋಷಣೆ ಮಾಡುತ್ತಿರುವವರಿಗೆಲ್ಲಾ ಮಾದಿಗರು ಎಂದು certificate ಕೊಡುತ್ತಿದ್ದಾರೆಯೆ?
ಹೊಲಯರೆಲ್ಲಾ ದುಡಿಯದೆ ದೇವರೆಂಬುದನ್ನು ಅತಿರೇಖಕ್ಕೆ ಕೊಂಡೊಯ್ದು ಶ್ರಮವಿಲ್ಲದೆ ಗಳಿಸುತ್ತಾರೆಯೆ? ಅಥವ ಆ ರೀತಿ ಗಳಿಸುತ್ತಿರುವ ಪುರೋಹಿತರೊಗೆಲ್ಲ ಹೊಲಯ ಅಂತ certificate ಕೊಡಲಾಗುತ್ತಿದೆಯೇ?

"ಬುದ್ಧ - ಬಸವ - ಅಂಬೇಡ್ಕರ್" ಎಂದು ಉದ್ದುದ್ದ ಸಿದ್ಧಾಂತಗಳನ್ನು ಗೀಚಿದವರಿಗೆ ತಿಳಿದಿಲ್ಲವೆ?
ಗೌತಮ ಬುದ್ಧ ಸಂಪೂರ್ಣವಾಗಿ ಜಾತಿ ಎಂಬುದನ್ನು ನಿರಾಕರಿಸೊದ ಏಕೈಕ ವ್ಯಕ್ತಿ. ಅದನ್ನು ಜಗತ್ತೇ ಒಪ್ಪಿದೆ.
ಆದರೆ ಬಸವಣ್ಣ???

ಹೊಲಯ ಮಾದಿಗರ ಹೆಸರು ಹಾಳು ಮಾಡಿದ ವಚನಕಾರರು ಅದು ಹೇಗೆ ತಾನೆ ಸಮಾನತೆಯ ಹರಿಕಾರರಾಗುತ್ತಾರೆ?
ಅದು ಹೇಗೆ ಜಾತಿ ವ್ಯವಸ್ಥೆಯ ವಿರೋಧಿಗಳಾಗುತ್ತಾರೆ?

ಇಷ್ಟೆಲ್ಲಾ ನಡೆದರೂ ಆ ಪ್ರಾಂತ್ಯದ ಹೊಲಯರು ಸುಮ್ಮನಿದ್ದರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಅದಕ್ಕೂ ಉತ್ತರವಿದೆ.
ಯಾವಾಗ ಹೊಲಯ ಎಂಬ ಪದದ ಅರ್ಥ ಕೆಡುತ್ತಾ ಸಾಗುತ್ತದೋ, ಕ್ರಮೇಣ ಆ ಪ್ರಾಂತ್ಯದ ಹೊಲಯರೆಲ್ಲಾ ಆ ಗುರುತಿನಿಂದ ಹೊರಬಂದು ಕೆಲವರು ಲಿಂಗವಂತರಾಗಿ ಬಸವಣ್ಣನ ಅನುಯಾಯಿಗಳಾದರೆ, ಇನ್ನು ಹಲವರು ಹೊಲಯ ಎಂಬ ಗುರುತಿನಿಂದ ಹೊರ ಬಂದು ತಮ್ಮ ಚಾಲುಕ್ಯ ಅರಸುಕುಲದ ಗುರುತಾಗಿ ಅವರು ವಾಸಿಸುತ್ತಿದ್ದ ಚಾಲುಕ್ಯರ ಕೇರಿ- ಚಾಲುಕ್ಯ ವಾಡೆ ಎಂಬ ಅರ್ಥವೆಂಬತೆ, ಚಾಲುಕ್ಯರ ವಾಡೆ ಎನಿಸಿಕೊಳ್ಳುತ್ತಾರೆ.
ಇದೇ ಕಾಲಾನಂತರದಲ್ಲಿ ರೂಪಾಂತರಗೊಂಡು ಚಲುವಾದಿ/
ಛಲವಾದಿಯಾಗುತ್ತದೆ.

ಉತ್ತರ ಕರ್ನಾಟಕದ ಚಲವಾದಿಗಳು ಆದಿ ಶೈವರು. ಇಲ್ಲಿ ಆದಿ ವೈಷ್ಣವರ ಸಂಖ್ಯೆ ಕಮ್ಮಿ. ರಾಯಚೂರು ಭಾಗದ ಚಲವಾದಿ ಹೊಲಯ ದಾಸರಲ್ಲಿ ಮಾತ್ರ ಶ್ರೀ ವೈಷ್ಣವ ಪಂಥದ ಅನುಸರಣೆ ಇದೆ.

ಸೂಕ್ಷ್ಮವಾಗಿ ಗಮನಿಸಿ! ಉತ್ತರ ಕರ್ನಾಟಕದಲ್ಲಿ ಹೊಲಯಮಾದಿಗರ ಹೆಸರುಗಳು ಹಾಳಾದಂತೆ, ದಕ್ಷಿಣ ಕರ್ಣಾಟಕದಲ್ಲಿ ಹಾಳಾಗಿರುವುದಿಲ್ಲ.
ಅಷ್ಟೇ ಏಕೆ ಭಾರತದ ಯಾವ ಭಾಗದಲ್ಲು ಇದರ ಸಮಾನಾಂತರ ಪದಗಳ ಅರ್ಥ ಹಾಳಾಗಿರುವುದಿಲ್ಲ!
ಅಥವ ಪೂರ್ವ ಸಾಹಿತ್ಯದಲ್ಲಿ ಅದು ಕೀಳಾರ್ಥದಲ್ಲಿ ಬಳಕೆಯಾಗಿರುವುದಿಲ್ಲ!

ದಕ್ಷಿಣ ಕರ್ನಾಟಕದಲ್ಲಿ ಹೊಲಯರು ತಮ್ಮನ್ನು ಹೊಲಯರೆಂದೇ ಗುರುತಿಸಿಕೊಳ್ಳುತ್ತಾರೆ.
ಸ್ಥಳೀಯ ಜಾನಪದದಲ್ಲಿ ಹೊಲಯರು-ದೊಡ್ಡ ಹೊಲಯರು ಎಂಬುದು ಘನತೆ ಮತ್ತು ಗೌರವ ಸೂಚಕ ಪದವಾಗಿದೆ.
ದೊಡ್ಡ ಹೊಲಗೇರಿ ಚಿಕ್ಕ ಹೊಲಗೇರಿಗಳು ಬೆಳದು ದೊಡ್ಡ ದೊಡ್ಡ ಪಟ್ಡಣಗಳಾದದ್ದು ಈಗ ಇತಿಹಾಸ.
ಒಂದು ಕಾಲಕ್ಕೆ ಉತ್ತರದಲ್ಲೂ ಇಂಥದೇ ಉದಾಹರಣೆಗಳು ಸಿಗುತ್ತವೆ.
ಚಾಲುಕ್ಯರ ಮೂಲ ಎನ್ನಲಾದ ಲಕ್ಷೀಶ್ವರಕ್ಕೆ ಪೂರ್ವದಲ್ಲಿ ಪುಲಗೇರಿ ಎಂಬ ಹೆಸರಿತ್ತು. ಅದು ಪುಲಯರ ಕೇರಿ.
ಬಸವಣ್ಣನವರ ನಿಲುವು ತಮ್ಮ ಜೀವನದ ಕಡೆಯ ದಿನಗಳಲ್ಲಿ ಬದಲಾದಂತಿದೆ! ಏಕೆಂದರೆ, ಆರಂಭದಲ್ಲಿ ಹೊಲಯ ಮಾದಿಗರ ಹೆಸರುಗಳ ಅರ್ಥಗಳನ್ನೇ ಹಾಳುಗೆಡವಿದ್ದ ಇವರು ಕಡೆಯಲ್ಲಿ, ಮಾದಿಗರ ಮನೆಯ ಶಿಶು ನಾನು ದಾಸರ ಮನೆಯ ದಾಸ, ಲಿಂಗಾಯತ ಪಂಥ ಬೆಳೆದದ್ದೇ ಹೊಲಯ ಮಾದಿಗರಿಂದ, ಹೊಲಯರ ಮನೆಯಿಂದ ನಾಯಿ ಬಂದರೂ ಸಹ ಲಿಂಗದೀಕ್ಷೆ ಕೊಡುತ್ತೇನೆ ಎಂದು ಹೊಲಯ ಮಾದಿಗರನ್ನು ಅದೇ ಹೆಸರಿನಲ್ಲಿ ಹಾಡಿ ಹೊಗಳುತ್ತಾರೆ.

ಹೀಗೆ ಉತ್ತರ ಕರ್ನಾಟಕದಲ್ಲಾದ ಬದಲಾವಣೆಯ ಪ್ರಭಾವ ಇಲ್ಲಿ (ದಕ್ಷಿಣ ಕರ್ನಾಟಕ) ಹೆಚ್ಚು ಬದಲಾವಣೆ ತರಲಿಲ್ಲ.
ಇದಕ್ಕೆ ಕಾರಣ ಒಂದು ಕಡೆ ರಾಮಾನುಜಾಚಾರ್ಯರಾದರೆ, ಮತ್ತೊಂದು ಕಡೆ ಲಿಂಗಾಯತಕ್ಕೆ ಪ್ರತಿಕ್ರಾಂತಿಯಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಹುಟ್ಟಿಕೊಂಡ ಮಂಟೇಸ್ವಾಮಿ ಹಾಗು ಮಲೆಮಹದೇಶ್ವರರ ಪರಂಪರೆ.
ಇವರು ಇಷ್ಟಲಿಂಗಗಳನ್ನು ಕಿತ್ತುಹಾಕಿಸಿದ ನಿಜ ಶರಣರು!
"ಲಿಂಗಾಯತಕ್ಕೆ ಪ್ರತಿಕ್ರಾಂತಿ" ಎಂದರೆ ಸರಿಯಾಗದು!
ಬಸವಣ್ಣರ ಕಾಲದಲ್ಲೇ ಅವರ ಲಿಂಗಾಯತ ತತ್ವ ಪಟ್ಟಬದ್ರ ಹಿತಾಸಕ್ತರ ಕೈಲಿ ಸಿಲುಕಿ ಮಲಿನಗೊಳ್ಳಲು ಆರಂಭಿಸಿದಾಗ ಈ ಮಂಟೇಸ್ವಾಮಿ ಹಾಗು ಮಲೆಮಹದೇಶ್ವರರ ಪರಂಪರೆ ತಲೆ ಎತ್ತುತ್ತವೆ.

ಬಸವಣ್ಣ ಬದಲಾದರು!
ಆದರೆ ಉಳಿದ ವಚನಕಾರರು ಬದಲಾದರೆ?
ಊಹು! ಇಲ್ಲ!
ಮಳೆ ಬಿಟ್ಟರು ಮರದ ಹನಿ ಬಿಡದು ಅನ್ನೊ ಹಾಗೆ, ಬಸವಣ್ಣನಿಗೆ ತನ್ನ ತಪ್ಪಿನ ಅರಿವಾಗಿ ಹೊಲಯ ಮಾದಿಗ ಹೆಸರುಗಳನ್ನು ಕೀಳಾರ್ಥದಲ್ಲಿ ಬಳಸುವುದನ್ನು ನಿಲ್ಲಿಸಿದರೂ ಬೇರೆ ವಚನಕಾರರು ನಿಲ್ಲಿಸಲಿಲ್ಲ!
ಹೆಸರು ಹೇಳುವುದು ಬೇಡ!
ಕೆಲ ವಚನಕಾರರು,
ತಾಯ ಬಯ್ಯುವವನು ಹೊಲಯ!
ಹೆಂಡತಿ ಮಕ್ಕಳ ಸಾಕಲಾಗದವನು ಹೊಲಯ!
ತಂದೆಯ ಹೊಡೆಯುವವನು ಹೊಲಯ! ಹಿಂಗೆಲ್ಲಾ ಗೀಚಿದ್ದಾರೆ!
ಕೆಲ ನಿರ್ಧಿಷ್ಟ ಜಾತಿಗಳ ನಿಂದನೆ ಮಾಡುವವರು ಯಾವ ಸೀಮೆಯ ಶಿವಶರಣರು?
ಇವರು ಯಾವ angle ನಿಂದ ಜಾತಿಮುಕ್ತ ಸಮಸಮಾಜ ಸೃಷ್ಟಿಸುವವರಂತೆ ಕಾಣುತ್ತಾರೆ?!?!?
ಇದೇ ಮಾದರಿಯನ್ನು ಮುಂದುವರೆದ ಕೀರ್ತಿ ಉತ್ತರ ಕರ್ನಾಟಕದ ದಾಸರಿಗೆ ಸಲ್ಲುತ್ತದೆ! ಅಲ್ಲಿಂದ ಹಿಡಿದು ಇಲ್ಲಿಯವರೆಗೂ ಇದು ಕೆಲವು ಕಡೆ ಕೀಳಾರ್ಥದಲ್ಲಿ ಬಳಕೆಯಾಗಿರುವುದಂತೂ ಸಾಹಿತ್ಯ ಲೋಕದ ದುರಂತವೇ ಸರಿ!
ಇತಿಹಾಸ ಪ್ರಜ್ಞೆ ಇದಕ್ಕೆಲ್ಲಾ ಕಾರಣವೆಂಬುದಂತು ನಿಜ!
ಭಾರತದ ಯಾವ ಭಾಷೆಯಲ್ಲೂ, ಪ್ರಾಂತ್ಯದಲ್ಲೂ, ಸಾಹಿತ್ಯದಲ್ಲೂ ಇರದ ಇಂತಹ ಒಂದು ಕೀಳು ಕೃತ್ಯವು ಕನ್ನಡ ಸಾಹಿತ್ಯಕ್ಕೆ ೧೨ನೇ ಶತಮಾನದಲ್ಲಿ ನಡೆದು ಹೋಗಿದೆ!
೧೨ನೇ ಶತಮಾನದ ವಚನ ಸಾಹಿತ್ಯ ಕನ್ನಡಕ್ಕೆ ಕಿರೀಟವಾದರೆ, ಅದರಲ್ಲಿ ಆಗಿರುವ ಹೊಲಯ ಮಾದಿಗರ (ಹೆಸರುಗಳ) ನಿಂದನೆ ಅದೇ ಕನ್ನಡದ ಪಿತೃಗಳಾದ ಆದಿ ಕನ್ನಡಿಗರಿಗೆ (ಹೊಲಯ ಮಾದಿಗರಿಗೆ) ಶಾಪವಾಗಿದೆ. ಕನ್ನಡನಾಡಿನ ಮೂಲನಿವಾಸಿಗಳಿಗೆ ಬಗೆದಿರುವ ದ್ರೋಹವಾಗಿದೆ ಎಂದರೆ ತಪ್ಪಾಗಲಾರದು!
ಒಂದು ಪಕ್ಷ ಹೊಲಯ ಮಾದಿಗರು ಬಸವಣ್ಣನನ್ನು ಕ್ಷಮಿಸಿ ಬಿಡಬಹುದು! ಪ್ರಾರಂಭದಲ್ಲಿ ಹೊಲಯ ಮಾದಿಗ ಎಂಬ ಪದಗಳ ಅರ್ಥಗಳೇ ಕೆಡುವಂತೆ ಆಗಲು ಪರೋಕ್ಷ ಕಾರಣವಾದ ಬಸವಣ್ಣ, ತಮ್ಮ ಕಡೇ ದಿನಗಳಲ್ಲಿ ತಮ್ಮ ನಿಲುವು ಬದಲಿಸಿ ಹೊಲಯ ಮಾದಿಗರನ್ನು ಹೊಗಳುತ್ತಾರೆ!

ಆದರೆ ಮಿಕ್ಕ ವಚನಕಾರರು ಮಾಡಿದ್ದೇನು?
ಬಸವಣ್ಣ ಬದಲಾದ ಕೂಡಲೆ ಮಿಕ್ಕವರೂ ಬದಲಾದ ಬೇಕೆಂದೇನಿಲ್ಲವಲ್ಲ? ವಚನ ಸಾಹಿತ್ಯದಲ್ಲಿ ಹೊಲಯ ಮಾದಿಗರ ಕೃತಿಗಳು ಸಿಗುವುದು ಬಹಳ ವಿರಳ! ಸಿಕ್ಕಿದರೂ ಸಹ ಅವು ಬೆರಳೆಣಿಕೆಯಷ್ಟು! ಅಲ್ಲೆಲ್ಲಾ, "ಕುರಿಕೋಳಿ ಕಿರುಮೀನು ತಿಂದವರನ್ನೆಲ್ಲಾ ಕುಲಜರೆನ್ನುವಿರಿ, ಶಿವಗೆ ಪಂಚಾಮೃತವರೆವ ಗೋವ ತಿಂದರೆ ಮಾದಿಗನೆನ್ನುವಿರಿ' ಎಂದು ಹೊಲಯ ಮಾದಿಗರ ಪರವೇ ಮಾತಾಡಿದರೂ ಸಹ, ಬೇರೆ ವಚನಕಾರರು ಹೊಲಯ ಮಾದಿಗ ಎಂಬ ಪದಾರ್ಥಗಳ ಭಂಜನವನ್ನೇ ನಿರಂತರವಾಗಿ ಮಾಡಿದ್ದಾರೆ!

ಒಮ್ಮೊಮ್ಮೆ ಈ ನಿದರ್ಶನ " "ಹೊಲಯ ಮಾದಿಗರ ಹೆಸರುಗಳ ಹಾಳುಗೆಡವಿ ತುಳಿದವರು ವೈದಿಕರ ಅಥವ ವಚನಕಾರರ, ವಚನಕಾರರ ಮತವಾ?" ಎಂಬ ದೊಡ್ಡ ಅನುಮಾನವನ್ನೇ ಮೂಡಿಸತ್ತೆ!
ವೈದಿಕರದ್ದು ಎನ್ನಲಾಗುವ ಚಾತುರ್ವರ್ಣವು ವೃತ್ತಿಯಾಧಾರಿತ (Labour Division) ವಿಭಾಗೀಕರಣ. ಅಲ್ಲಿ ಪಂಚಮರು ಅಥವ ಚಾಂಡಾಲರು ಅಥವ ಇನ್ಯಾವುದೇ ವರ್ಣ ಕುಲಾಧಾರಿತವಾದುದಲ್ಲ. ಹಿಂದಿನ postನಲ್ಲಿ ತಿಳಿಸಿರುವಂತೆ ವರ್ಣಪದ್ಧತಿಯಲ್ಲಿ ಆಯಾ ಸ್ಥಿತಿ ಮತ್ತು ಆಸಕ್ತಿಯ ಅನುಗುಣವಾಗಿ ಕುಲ ನಿರಪೇಕ್ಷವಾಗಿ ಯಾರು ಬೇಕಾದರು ಯಾವ ವರ್ಣದಲ್ಲಿಯಾದರು ಯೋಗ್ಯಾರ್ಹವೆಂಬನುಸಾರವಾಗಿ ವರ್ಣ ದರ್ಜೆಗಳಲ್ಲಿ ಗುರುತಿಸಲಾಗಿತಿತ್ತು. ಪಂಚಮ ವರ್ಣಕ್ಕೆ ಬಿದ್ದವರೆಲ್ಲ ತುಚ್ಛೀಕರಣಕ್ಕೆ ಒಳಗಾಗುತಿದ್ದರು! ಆದರೆ ಅದು ನೇರವಾಗಿ ಕುಲಗಳ ಮೇಲೆ ಪ್ರಭಾವ ಬೀರುತ್ತಿರಲಿಲ್ಲ.
ಕರ್ನಾಟಕದ ಮಟ್ಟಿಗೇ ಹೇಳುವುದಾದರೆ ಆದಿರಾಜರ ಕುಲಗಳಾದ ಹೊಲಯ ಮಾದಿಗ ಕುಲಗಳು ಶರಣರ ಕಾಲಕ್ಕೇ ಕೀಳು ಕುಲಗಳಾಗಿದ್ದವು ಎಂಬುದು ಸತ್ಯಕ್ಕೆ ದೂರವಾದ ಮಾತು!
ಕುಲ ಜಾತಿ ಸೂಚಕ ಪದಗಳಾದ ಹೊಲಯ ಮಾದಿಗ ಹೆಸರುಗಳನ್ನು ನೇರವಾಗಿ ಕೆಡಿಸೊ ಸಾಹಸವನ್ನು ಹಲವು ವಚನಕಾರರು ಮಾಡಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ!
ಹೊಲಯ (ನಾಗ/ವಲ್ಲಭ/ಭೈರ), ಮಾದಿಗ (ಮಾದ/ಯಾದ/ಮಾದಿಗ) ಎಂಬುದು ಸನಾತನ ಮತ್ತು ವೈದಿಕ ಮತ್ತು ಅವೈದಿಕ ಸಾಹಿತ್ಯದಲ್ಲಿ ಎಲ್ಲೂ ತುಚ್ಛೀಕರಣಗೊಳಿಸಿರುವ ಉದಾಹರಣೆಗಳು ಸಿಗುವುದಿಲ್ಲ!

ಕೆಲವರು ಲಿಂಗಾಯತ ಮತ ಹುಟ್ಟಿದ್ದೇ ದಮನಿತರ ಹೊಲಯ ಮಾದಿಗರ ಉದ್ಧಾರಕ್ಕೆ ಎಂಬ ಬಹು ಉತ್ಪ್ರೇಕ್ಷೆಯ ಮಾತುಗಳು ಕೇಳುತ್ತೇವೆ!
ಆದರೆ ಅದು ಎಷ್ಟು ಸತ್ಯ ಎಂಬುದೇ ಯಕ್ಷ ಪ್ರಶ್ನೆ!
ಲಿಂಗಾಯತರಲ್ಲಿ ಅತಿ ದೊಡ್ಡ ವರ್ಗವಾದ ಪಂಚಮಸಾಲಿಗಳು ಹೊಲಯ ಮಾದಿಗ ಮೂಲದವರೆ ಎಂದು ಹಲವರು ಅಭಿಪ್ರಾಯ ಪಡುತ್ತಾರೆ! ಅವರನ್ನು ಹೊರತು ಪಡಿಸಿಯೂ ಕರ್ನಾಟಕದಲ್ಲಿ ಇಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಹೊಲಯ ಮಾದಿಗರಿದ್ದಾರೆ!
ಕನ್ನಡಿಗರು ಕಟ್ಟಿದ ಮೊದಲ ಧರ್ಮ ಲಿಂಗಾಯತ ಧರ್ಮ, ಅದು ಹೊಲಯ ಮಾದಿಗರಿಂದ ಹೊಲಯ ಮಾದಿಗರಿಗಾಗಿ ಬೆಳೆದ ಮೊದಲ ಕನ್ನಡದ ಧರ್ಮ ಎಂದು ಅತಿ ದೊಡ್ಡ ಸುಳ್ಳು!
ಕನ್ನಡಿಗರು ಕಟ್ಟಿ ಬೆಳೆಸಿದ ಧರ್ಮ ಆದಿ ಕರ್ನಾಟಕ ಧರ್ಮ! ಆದಿ ಕನ್ನಡಿಗರದ್ದು ಆದಿ ಕರ್ಣಾಟ ಪರಂಪರೆ. ಅದೇ ಕನ್ನಡಿಗರ ಮೂಲ ಹಾಗು ಮೊದಲ ಸಂಸ್ಕೃತಿ. ಧರ್ಮ.

ಇನ್ನು ಲಿಂಗಾಯತ ಮತ ಹುಟ್ಟಿದ್ದು ಹೊಲಯ ಮಾದಿಗರ ಉದ್ಧಾರಕ್ಕೆ ಎನ್ನುವುದಕ್ಕಿಂತ ಆ ಕಾಲದ ದಮನಿತರಿಗಾಗಿ ಎಂದು ಹೇಳುವುದು ಸರಿಯಾದ ವಾಕ್ಯ. ಹೊಲಯ ಮಾದಿಗರ ಕುಲಸಿರಿ ಅಥವ ಹಿರಿಮೆ ಗರಿಮೆಗಳ ಪಥನ ಆರಂಭವಾದದ್ದೇ ೧೨-೧೩ನೇ ಶತಮಾನದಿಂದ! ಇದು ಕೇವಲ ಆರಂಭವಾಗಿತ್ತು! ಲಿಂಗಾಯತ ಮತ ಹುಟ್ಟಿಕೊಂಡಿದ್ದು ಇದೇ ಕಾಲಘಟ್ಟದಲ್ಲಿ!

ಬಹುಶಃ ಲಿಂಗಾಯತ ಮತ ನಿರ್ಮಾಣವು ಬಹುಸಂಖ್ಯಾತರಾಗಿದ್ದ ಹೊಲಯ ಮಾದಿಗರನ್ನು ಕೇವಲ ಮತ ನಿರ್ಮಾಣಕ್ಕೆ ಜನಸಂಖ್ಯೆಯ ಸರಕಾಗಿಸಿಕೊಂಡಿದ್ದಂತೆ ಕಾಣುತ್ತದೆ! ಏಕೆಂದರೆ ೧೨-೧೩ನೇ ಶತಮಾನಕ್ಕೆ ದಕ್ಷಿಣ ಭಾರತವು ಪೊಲನಾಡು ಪೊಲಭೂಮಿ ತೆಂಗಣರ ಭೂಮಿ ಎಂದರೆ ಹೊಲಯ ಮಾದಿಗರ (ತೆಂಗಣರ) ಭೂಮಿ ಎಂದೇ ಕರೆಯಲಾಗುತ್ತತ್ತು, ಮತ್ತು ಈಗಿನಂತೆ ನೂರಾರು ಜಾತಿಗಳ ಅಸ್ತಿತ್ವ ಅಂದು ಇರುವುದಿಲ್ಲ! ಇದ್ದರೂ ಸಹ ಅವೆಲ್ಲ ಕುಲಾಧಾರಿತವಾಗಿದ್ದು, ಅವರಲ್ಲಿಯೂ ಸಹ ಹೊಲಯ ಮಾದಿಗರ ಕುಲದವರೇ ಬಹುಸಂಖ್ಯಾತರು.
ಬಹುಶಃ ಇದೇ ಕಾರಣಕ್ಕೆ ಹೊಲಯ ಮಾದಿಗರನ್ನು ಸೆಳೆಯಲು ಎಲ್ಲಾ ರೀತಿಯ ಮಾರ್ಗಗಳನ್ನು ಬಳಸಿರುವಂತೆ ಲಿಂಗಾಯತ ಮತ ನಿರ್ಮಾಣದ ಹಾದಿ ಕಾಣುತ್ತದೆ!
ಇಂದು ಇದೇ ಹೊಲಯ ಮಾದಿಗರ ಯುವಕರು ರಾಮಾನುಜಾಚಾರ್ಯರು, ಮಂಟೇಸ್ವಾಮಿ, ಮಲೆಮಹದೇಶ್ವರರನ್ನು ಅರ್ಥಾತ್ ಕಡೆಗಣಿಸಿ, ತಮ್ಮ ಕುಲದ ಹೆಸರುಗಳ ಅರ್ಥಗಳನ್ನು ಕೆಡಿಸಿದವರಲ್ಲೊಬ್ಬರಾದ ಶರಣರನ್ನೇ ಹಾಡಿ ಹೊಗಳುವುದನ್ನು ಕಂಡರೆ, ಇವರ ಇತಿಹಾಸ ಪ್ರಜ್ಞೆ ಯಾವ ಮಟ್ಟದಲ್ಲಿದೆ ಎಂದು ಮನಸ್ಸು ಮರುಗುತ್ತದೆ!

ಆದರೆ ಇತ್ತೀಚೆಗೆ ಹೊರಬರುತ್ತಿರುವ ಹಲವು ಸಂಶೋಧನಾತ್ಮಕ ರೋಚಕ ಸತ್ಯಗಳು ಹೊಲಯ ಮಾದಿಗರ ಹಿರಿಮೆ ಗರಿಮೆಗಳನ್ನು ಸಾರುತ್ತಿವೆ.
ಸಂಶೋಧನಾತ್ಮಕ ಲೇಖನಗಳು, ಲೇಖಕರು ಇದರ ಬಗ್ಗೆ ಹೆಚ್ಚೆಚ್ಚು ಬರೆದು ಹೊಲಯರು ಮಾದಿಗರು ಎಂಬ ಹೆಸರು ಬಳಕೆಯಾಗಿ ಉಳಿಯುವಂತೆ ಮಾಡಿವೆ.
ಈ ಪದಗಳ ಬಳಕೆ ಉಪನಾಮದಂತೆ ಪುನರ್ಬಳಕೆಯಾಗುತ್ತಿರುವುದು ಖುಷಿಯ ಸಂಗತಿ.
ಇತಿಹಾಸದ ಅರಿವು ಮೂಡುತ್ತದೆ. ಕೀಳರಿಮೆ ಕ್ರಮೇಣ ಕಮ್ಮಿಯಾಗುತ್ತಿದೆ. ಸಾಹಿತ್ಯಿಕವಾಗಿ ಹಾಗು ಜನಮಾನಸದ ಬಳಕೆಯಲ್ಲಿ ಈ ಲೋಪ ಸರಿಯಾದರೆ ಎಲ್ಲವೂ ಸರಿಯಾದಂತೆಯೆ!
ಜನಸಂಘ, ಸಂಘಟನೆ, ಜಾತಿ ದಾಖಲೆ, ಇತ್ಯಾದಿಗಳಲ್ಲಿ ಇವು ಹೆಚ್ಚೆಚ್ಚು ಬಳಕೆಯಾಗಬೇಕು.
ಪೂರ್ವಾಗ್ರಹ ಪೀಡಿಕೆ ಮತ್ತು ಕೀಳರಿಮೆ ಅಳಿಯಬೇಕು.
ಸಮುದಾಯದ ಮುಖಂಡರು ಇಂಥಹ ಇತಿಹಾಸದ ಅರಿವನ್ನು ಸಾಮಾನ್ಯರಲ್ಲಿ ತುಂಬ ಬೇಕು.

ಹೊಲಯ ಅಥವ ಮಾದಿಗ ಎಂಬುದು ಕೀಳು ಅಲ್ಲ!
ಬೈಗುಳವೂ ಅಲ್ಲ!
ಹೊಲಯರು ಆದಿ ಬೇಸಾಯಗಾರರು! ಮಾದಿಗರು ಆದಿ ಪಶುಪಾಲರು!
ಹೊಲಯರನ್ನು ಹೊಲಯರು ಎಂದು ಕರೆಯುವುದು ಅಪರಾಧವೂ ಅಲ್ಲ!
ಆದರೆ ಯಾವಭಾವದಲ್ಲಿ ಯಾವ ಅರ್ಥದಲ್ಲಿ ಆ ಪದ ಬಳಕೆಯಾಗುತ್ತದೆ ಎಂಬುದು ಮುಖ್ಯ!

"ಲೇಯ್ ಬೊಮ್ಮನ್, ಲೇಯ್ ಪುಳಚಾರ್, ಗೌಡ್ನಂತೆ *ಡ" ಎಂದು ಬಳಸುವುದಕ್ಕೂ, "ಶಾಸ್ತ್ರಿಗಳೇ..., ಶೆಟ್ಟರೇ...., ಗೌಡರೇ...., ಎಂದು ಬಳಸುವುದಕ್ಕೂ ವ್ಯತ್ಯಾಸವಿದೆ!
ಈ ವಿಚಾರದಲ್ಲಿ ನಮ್ಮವರೇ ಬದಲಾಗಬೇಕಿದೆ. ಮನಸ್ಥಿತಿಯೂ ಬದಲಾಗಬೇಕಿದೆ.
ಕೀಳರಿಮೆ ಬಿಟ್ಟು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ತಮ್ಮನ್ನು ತಾವೇ ಗೌರವಿಸಿಕೊಳ್ಳಲಿಲ್ಲ, ನಮ್ಮತನದ ಮೇಲೆ ನಮಗೇ ಹೆಮ್ಮೆ ಇಲ್ಲ ಎಂದರೆ, ಅದನ್ನು ಬೇರೆಯವರಿಂದ ನಿರೀಕ್ಷಿಸುವು ದಡ್ಡತನವಾಗತ್ತೆ.
ಮೊದಲು ನಮ್ಮೊಳಗೆ ನಮ್ಮ ಬಗ್ಗೆ ಹೆಮ್ಮೆ ಸ್ವಾಭಿಮಾನ ಮತ್ತು ಆತ್ಮವಿಶ್ವಾಸಗಳಯ ಮೂಡಬೇಕು. ಅದು ಬಾಹ್ಯದಲ್ಲಿ ಪ್ರತಿಬಿಂಬವಾಗುತ್ತದೆ. ಜಗತ್ತು ಕನ್ನಡಿಯಂತೆಯೇ ಇದೇ ಅಲ್ಲವೇ?

2 ಕಾಮೆಂಟ್‌ಗಳು:

  1. ಇದನ್ನುಆಳವಾದ ಅಭ್ಯಾಸ ವಿಶ್ಲೇಷಣೆ ಮಾಡಿ ಬರೇದಿದ್ದೀರಿ ಇದಕ್ಕೆ ಎರಡು ಮಾತಿಲ್ಲ. ನನ್ನವಿಚಾರ ಮಾನವ ಕೂಲ ಒಂದು. ಈ ಬಡೆದಾಟ ಕುಟುಂಬ ಗರ್ಮ ನಿರ್ಮಾಣವಾದಾಗಿಂದ ಸಾಗುತ್ತಲೇ ಇವೆ. ಮಾನವನಿಗೆ ಮೂಲ ಅವಶ್ಯಕತೆಗಳು ಕೊಡುವದೇ ನಿಜವಾದ ಧರ್ಮ. ಪಂಚಮರು ಎನ್ನುವ ವರ್ಣ ಹುಟ್ಟಿದಾಗಲೇ ಈ ಕಲಹ ಸುರುವಾದದ್ದು ಪ್ರಳಯದ ವರೆಗೆ ಸಾಗುವದು ಅನಿವಾರ್ಯವಾಗಿದೆ. ಧರ್ಮಾಂತರಕ್ಕೆ ಅರ್ಥವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಅವರವರು ಅವರವರ ಧರ್ಮ ಪಾಲಿಸಿಕೋಂಡು ಹೋದರೆ ಅಷ್ಟೇ ಸಾಕು. ಮತ್ತೊಬ್ಬರ ಮೇಲೆ ಸವಾರಿ ಮಾಡುವದು ಸಲ್ಲ. ಈ ಲೇಖನ ಬರೆದವರಷ್ಟು ನಾನು ಎಂಥ್ರಪೋಲಾಜಿ ಅಭ್ಯಾಸ ಮಾಡಿದವನಲ್ಲ.

    ಪ್ರತ್ಯುತ್ತರಅಳಿಸಿ
  2. ಸರ್ ನಿಮ್ಮ ಬರಹ ಓದಿ ಖುಷಿ ಆತು. ಸ್ವಾಭಿಮಾನದಿಂದ ಬದುಕಲು ಹೇಳಿದ್ದೀರಿ.ಮನುಷ್ಯರಿಗೆ ತಮ್ಮ ದೇಶ, ಕುಲ,ಭಾಷೆ ಇವುಗಳ ಕುರಿತು ಹೆಮ್ಮೆ ಇರಬೇಕು. ಹಾಗೇ ಸರಿಯಾದ ಇತಿಹಾಸವನ್ನೂ ತಿಳಿಯಬೇಕು.
    ಇನ್ನೊಂದು ಸಲಹೆ ದಲಿತರು ಕೇವಲ ಮೇಲ್ಜಾತಿಗಳ ನಿಂದನೆ ಮಾಡುತ್ತಾ ಹಿಂದೆ ಹಾಗೆ ಮಾಡಿದರು ಹೀಗೆ ಮಾಡಿದರೆಂದು ಅಲವತ್ತುಕೊಳ್ಳುತ್ತಾ ಜೀವಿಸುವದನ್ನು ಬಿಟ್ಟು ಸಮಾಜದ ಇತರ ಮೇಲ್ಜಾತಿಗಳೆನಿಸಿಕೊಂಡವರಿಗೆ ಸಡ್ಡು ಹೊಡೆಯುವಂತೆ ಎಲ್ಲಾ ರಂಗದಲ್ಲೂ ಮುಂದೆ ಬರಬೇಕು.

    ನನ್ನ ಪರಿಚಿತ ಶಿಕ್ಷಕರೊಬ್ಬರು ನನ್ನೆದುರು ಹೀಗೆ ಹೇಳುತ್ತಿದ್ದರು. (ಆಗ ಕರಣಂ ಮಲ್ಲೇಶ್ವರಿ ಕಂಚಿನ ಪದಕ ಪಡೆದಿದ್ದರು. ಅವರು ಬ್ರಾಹ್ಮಣರಂತೆ.) ನಮ್ ಮಂದೀಗಿ ಏನಾಗೇದ ಅಂತೀನಿ?? ಓದೂದರಾಗ ,ಬರಿಯೂದರಾಗ ಪೈಲಾ ಬರಲಿಲ್ಲಾಂದ್ರ ಬಿಡ್ಲಿ. ಆಟೋಟದಾಗರ ಪೈಲಾ ಬರಲಿಕ್ಕಿ ಏನ್ ಆಗೇದ ಅಂತಿದ್ದರು.
    ಇದೀಗ ತಾನೇ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಜನ ಸ್ವಲ್ಪ ಸಮಯ ಬೇಕಾಗುತ್ತದೆಂದು ಬಲ್ಲೆ.
    ಅವಕಾಶ ಸಿಕ್ಕಿ ಮೇಲೆ ಬಂದವರು ನವ ಬ್ರಾಹ್ಮಣರಾಗದೇ ತಮ್ಮವರ ಉದ್ಧಾರಕ್ಕೆ ಪ್ರಯತ್ನಿಸಬೇಕು.

    ಪ್ರತ್ಯುತ್ತರಅಳಿಸಿ